ಚೆಸ್‌: ಮಹಿಳಾ ತಂಡಕ್ಕೆ ಜಯ ಹಾಂಗ್‌ಝೌ: ಎರಡನೇ ಶ್ರೇಯಾಂಕದ ಭಾರತ ಮಹಿಳಾ ತಂಡ, ಏಷ್ಯನ್ ಗೇಮ್ಸ್‌ ಚೆಸ್‌ನ ಎರಡನೇ ಸುತ್ತಿನಲ್ಲಿ ಶನಿವಾರ ವಿಯೆಟ್ನಾಂ ತಂಡವನ್ನು 2.5–1.5 ರಿಂದ ಸೋಲಿಸಿತು. ಶನಿವಾರ ಪುರುಷರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಭಾರತ 2–2 ರಿಂದ ಪ್ರಬಲ ಉಜ್ಬೇಕಿಸ್ತಾನ ಜೊತೆ ಸಮ ಮಾಡಿಕೊಳ್ಳಬೇಕಾಯಿತು. ಮಹಿಳಾ ವಿಭಾಗದಲ್ಲಿ ವಿಯೆಟ್ನಾಮಿನ ವೊ ಥಿ ಕಿಮ್‌ ಫುಂಗ್‌ ಅವರನ್ನು ಎರಡನೇ ಬೋರ್ಡ್‌ನಲ್ಲಿ ಸೋಲಿಸಿದ ವೈಶಾಲಿ ರಮೇಶಬಾಬು (ಪ್ರಜ್ಞಾನಂದ ಅಕ್ಕ) ಭಾರತಕ್ಕೆ ಮೊದಲ ಜಯತಂದುಕೊಟ್ಟರು. ಮೊದಲ ಬೋರ್ಡ್‌ನಲ್ಲಿ ಕೋನೇರು ಹಂಪಿ ಸೇರಿದಂತೆ ಉಳಿದ ಬೋರ್ಡ್‌ಗಳಲ್ಲಿ ವಂತಿಕಾ ಅಗರವಾಲ್ ಮತ್ತು ಸವಿತಾಶ್ರೀ ಭಾಸ್ಕರ್ ಎದುರಾಳಿಗಳ ಜೊತೆ ಪಾಯಿಂಟ್‌ ಹಂಚಿಕೊಂಡರು. ಪುರುಷರ ವಿಭಾಗದಲ್ಲಿ ಗುಕೇಶ್ ಮೊದಲ ಬೋರ್ಡ್‌ನಲ್ಲಿ ಪ್ರಬಲ ಆಟಗಾರ ನೊಡಿರ್ಬೆಕ್ ಅಬ್ದುಸತ್ತಾರೋವ್ ಜೊತೆ ಪಾಯಿಂಟ್‌ ಹಂಚಿಕೊಳ್ಳುವಲ್ಲಿ ಯಶಸ್ವಿ ಆದರು. ಪ್ರಜ್ಞಾನಂದ ಜಾವೊಖಿರ್ ಸಿಂಧರೋವ್ ವಿರುದ್ಧ ಸ್ವಲ್ಪ ಮೇಲುಗೈ ಪಡೆದಿದ್ದರೂ, ಗೆಲುವನ್ನಾಗಿ ಪರಿವರ್ತಿಸಲು ಆಗದೇ ‘ಡ್ರಾ’ಕ್ಕೆ ಒಪ್ಪಬೇಕಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.