ಬ್ಯಾಡ್ಮಿಂಟನ್‌: ಪುರುಷರ ತಂಡಕ್ಕೆ ಬೆಳ್ಳಿ ಹಾಂಗ್‌ಝೌ (ಪಿಟಿಐ): ಭಾರತ ಪುರುಷರ ಬ್ಯಾಡ್ಮಿಂಟನ್‌ ತಂಡದವರು ಏಷ್ಯನ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಜಯಿಸಿದರು. ಭಾನುವಾರ ನಡೆದ ಫೈನಲ್‌ನಲ್ಲಿ 2–3 ರಿಂದ ಚೀನಾ ಕೈಯಲ್ಲಿ ಪರಾಭವಗೊಂಡರು. ಎಚ್‌.ಎಸ್‌.ಪ್ರಣಯ್‌ ಅವರು ಗಾಯಗೊಂಡು ಕಣಕ್ಕಿಳಿಯದೇ ಇದ್ದುದು ಭಾರತಕ್ಕೆ ಮುಳುವಾಗಿ ಪರಿಣಮಿಸಿತು. ಫೈನಲ್‌ನಲ್ಲಿ ಉತ್ತಮ ಆರಂಭ ಪಡೆದಿದ್ದ ಭಾರತ 2–0 ಯಿಂದ ಮುನ್ನಡೆ ಸಾಧಿಸಿತ್ತು. ಮರುಹೋರಾಟ ನಡೆಸಿದ ಚೀನಾ, ಮುಂದಿನ ಮೂರೂ ಪಂದ್ಯಗಳನ್ನು ಪಂದ್ಯಗಳನ್ನು ಗೆದ್ದು ಚಿನ್ನಕ್ಕೆ ಮುತ್ತಿಟ್ಟಿತು. ಮೊದಲ ಸಿಂಗಲ್ಸ್‌ನಲ್ಲಿ ಲಕ್ಷ್ಯಸೇನ್‌ 22–20, 14–21, 21–18 ರಿಂದ ಶಿ ಯುಗಿ ಅವರನ್ನು ಮಣಿಸಿದರು. ಡಬಲ್ಸ್‌ ಪಂದ್ಯದಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ 21–15, 21–18 ರಿಂದ ಲಿಯಾಂಗ್‌ ವಿ ಕೆಂಗ್‌– ವಾಂಗ್‌ ಚಾಂಗ್‌ ವಿರುದ್ಧ ಗೆದ್ದು ಭಾರತಕ್ಕೆ 2–0 ಮೇಲುಗೈ ತಂದಿತ್ತರು. ಆದರೆ ಎರಡನೇ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ 22–24, 9–21 ರಿಂದ ಆಲ್‌ ಇಂಗ್ಲೆಂಡ್‌ ಚಾಂಪಿಯನ್ ಲಿ ಶಿಫೆಂಗ್‌ ಎದುರು ಸೋತರು. ಮೊದಲ ಗೇಮ್‌ನಲ್ಲಿ 18–14 ರಿಂದ ಮುನ್ನಡೆ ಸಾಧಿಸಿದ್ದ ಶ್ರೀಕಾಂತ್‌, ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟರು. ಎರಡನೇ ಡಬಲ್ಸ್‌ನಲ್ಲಿ ಧ್ರುವ್‌ ಕಪಿಲಾ– ಸಾಯಿ ಪ್ರತೀಕ್‌ 6–21, 15–21 ರಿಂದ ಲಿಯು ಯು ಚೆನ್‌– ಯು ಕ್ಸುವಾನ್ ಯಿ ಎದುರು ಸೋತರು. ಇದರಿಂದ ಪಂದ್ಯ 2–2 ರಲ್ಲಿ ಸಮಬಲ ಆಯಿತು. ನಿರ್ಣಾಯಕ ಸಿಂಗಲ್ಸ್‌ನಲ್ಲಿ ಪ್ರಣಯ್‌ ಬದಲು ಕಣಕ್ಕಿಳಿದ ಮಿಥುನ್‌ ಮಂಜುನಾಥ್‌ 12–21, 4–21 ರಿಂದ ವಿಶ್ವದ 20ನೇ ರ್‍ಯಾಂಕ್‌ನ ಆಟಗಾರ ವೆಂಗ್‌ ಹಾಂಗ್‌ ಯಾಂಗ್ ಅವರಿಗೆ ಮಣಿದರು. ಇದರಿಂದ ಚಿನ್ನ ಗೆಲ್ಲುವ ಅವಕಾಶ ಭಾರತದ ಕೈತಪ್ಪಿತು. ಏಷ್ಯನ್‌ ಗೇಮ್ಸ್ ಇತಿಹಾಸದಲ್ಲಿ ಪುರುಷರ ತಂಡ ವಿಭಾಗದಲ್ಲಿ ಭಾರತಕ್ಕೆ ದೊರೆತ ಮೊದಲ ಬೆಳ್ಳಿ ಪದಕ ಇದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.