| ಚೆಸ್‌: ಭಾರತ ಪುರುಷರ ತಂಡಕ್ಕೆ ನಿರೀಕ್ಷಿತ ಜಯ ಹಾಂಗ್‌ಝೌ: ಅಗ್ರ ಶ್ರೇಯಾಂಕದ ಭಾರತ ಪುರುಷರ ತಂಡ, ಏಷ್ಯನ್ ಗೇಮ್ಸ್‌ ಚೆಸ್‌ ತಂಡ ವಿಭಾಗದ ನಾಲ್ಕನೇ ಸುತ್ತಿನಲ್ಲಿ ಸೋಮವಾರ ಕಿರ್ಗಿಸ್ತಾನ ತಂಡವನ್ನು 3.5–0.5 ರಿಂದ ಸುಲಭವಾಗಿ ಸೋಲಿಸಿತು. ಆದರೆ ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಚೀನಾ 2.5–1.5 ರಿಂದ ಎರಡನೇ ಶ್ರೇಯಾಂಕದ ಭಾರತ ವಿರುದ್ಧ ಹೋರಾಟದ ಜಯಪಡೆಯಿತು. ಮೊದಲ ಬೋರ್ಡ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್, ಕಿರ್ಗಿಸ್ತಾನದ ಫಿಡೆ ಮಾಸ್ಟರ್‌ ಒರೋಜ್ಬೇವ್ ಅವರನ್ನು ಸೋಲಿಸಿದರೆ, ಎರಡನೇ ಬೋರ್ಡ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್ ವಿದಿತ್‌ ಗುಜರಾತಿ, ಟೊಲೊಗೊನ್ ಅವರನ್ನು ಮಣಿಸಿದರು. ಅರ್ಜುನ್ ಇರಿಗೇಶಿ ಮತ್ತು ಸೆಜ್‌ಬೆಕೋವ್ ನಡುವಣ ಪಂದ್ಯ ‘ಡ್ರಾ’ ಆಯಿತು. ಅನುಭವಿ ಪಿ.ಹರಿಕೃಷ್ಣ, ಝಾಕ್ಸಿಲಿಕೋವ್ ಅವರನ್ನು ಸೋಲಿಸಿದರು. ಪ್ರಜ್ಞಾನಂದ ಈ ಪಂದ್ಯದಲ್ಲಿ ಆಡಲಿಲ್ಲ. ಮೂರನೇ ಶ್ರೇಯಾಂಕದ ಇರಾನ್ ತಂಡ 2.5–1.5 ರಿಂದ ನಾಲ್ಕನೇ ಶ್ರೇಯಾಂಕದ ಉಜ್ಬೇಕಿಸ್ತಾನ ತಂಡವನ್ನು ಸೋಲಿಸಿತು. ಎರಡನೇ ಬೋರ್ಡ್‌ನಲ್ಲಿ ಎಸ್‌.ತಬಾತಬೇಯಿ (ರೇಟಿಂಗ್‌ 2685) ಅವರು ಉಜ್ಬೇಕ್ ಆಟಗಾರ ಜಾವೊಕಿರ್ ಸಿಂಧರೊವ್ (2658) ವಿರುದ್ಧ ಗಳಿಸಿದ ಜಯ ಇರಾನ್ ಪಾಲಿಗೆ ಮಹತ್ವಪೂರ್ಣವಾಯಿತು. ಉಳಿದ ಮೂರು ಬೋರ್ಡ್‌ಗಳ ಪಂದ್ಯಗಳು ಡ್ರಾ ಆದವು. ಬಹುನಿರೀಕ್ಷಿತ ಮೊದಲ ಬೋರ್ಡ್‌ನ ಪಂದ್ಯದಲ್ಲಿ ಉಜ್ಬೇಕ್ ಆಟಗಾರ ನಾಡಿರ್ಬೆಕ್ ಅಬ್ದುಸತ್ತಾರೋವ್ (2716) ಮತ್ತು ಪರ್ಹಾಮ್ ಮಘಸೂಡ್ಲು (2707) ‘ಡ್ರಾ’ಕ್ಕೆ ಸಹಿ ಹಾಕಿದರು. ಮಹಿಳೆಯರ ವಿಭಾಗದ ಮೊದಲ ಬೋರ್ಡ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್‌ಗಳಾದ ಕೋನೇರು ಹಂಪಿ ಮತ್ತು ಹೌ ಇಫಾನ್ ಡ್ರಾ ಮಾಡಿಕೊಂಡರು. ಡಿ.ಹಾರಿಕಾ ಮತ್ತು ವಂತಿಕಾ ಅಗರವಾಲ್ ಕೂಡ ತಮ್ಮ ಪಂದ್ಯಗಳನ್ನು ಡ್ರಾ ಮಾಡಿಕೊಂಡರು. ಆದರೆ ಮೂರನೇ ಬೋರ್ಡ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್‌ ತಾನ್ ಝೊಂಗಿ ಅವರು ಐಎಂ ವೈಶಾಲಿ ರಮೇಶ್‌ಬಾಬು ಅವರನ್ನು ಮಣಿಸಿದ್ದು ಚೀನಾಕ್ಕೆ ನಿರ್ಣಾಯಕ ಮುನ್ನಡೆ ದೊರಕಿಸಿಕೊಟ್ಟಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.