ಹಾಕಿ: ಡ್ರಾ ಪಂದ್ಯದಲ್ಲಿ ಭಾರತ ಹಾಂಗ್‌ಝೌ (ಪಿಟಿಐ): ಭಾರತ ಮತ್ತು ದಕ್ಷಿಣ ಕೊರಿಯಾ ತಂಡಗಳ ಸಮಬಲದ ಪೈಪೋಟಿಯಿಂದಾಗಿ ಮಹಿಳಾ ವಿಭಾಗದ ಹಾಕಿ ಪಂದ್ಯವು 1–1ರಿಂದ ಡ್ರಾ ಆಯಿತು. ಭಾನುವಾರ ಗಾಂಗ್ಷು ಕೆನಾಲ್ ಸ್ಪೋರ್ಟ್ಸ್ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಆಟಗಾರ್ತಿ ಚೋ ಹೈಜಿನ್ 12ನೇ ನಿಮಿಷದಲ್ಲಿ ಗೋಲು ಹೊಡೆದರು. ದಕ್ಷಿಣ ಕೊರಿಯಾ ತಂಡವು ಈ ಮುನ್ನಡೆಯನ್ನು ಅರ್ಧಗಂಟೆ ಕಾಪಾಡಿಕೊಂಡಿತು. ಆದರೆ 44ನೇ ನಿಮಿಷದಲ್ಲಿ ಭಾರತದ ನವನೀತ್ ಕೌರ್ ತೋರಿದ ಕೈಚಳಕದಿಂದ ಗೋಲು ದಾಖಲಾಯಿತು. ನಂತರದ ಆಟದಲ್ಲಿ ಉಭಯ ತಂಡಗಳ ಗೋಲು ಗಳಿಸುವ ಯತ್ನಗಳು ಸಫಲವಾಗಲಿಲ್ಲ. ಭಾರತದ ಆಟಗಾರ್ತಿಯರು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಲ್ಲಿ ಪರಿವರ್ತಿಸುವಲ್ಲಿ ವಿಫಲರಾದರು. ಈ ಡ್ರಾದಿಂದಾಗಿ ಭಾರತ ತಂಡವು ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ ಆರನೇ ಸ್ಥಾನ ಹೊಂದಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತವು 13–0ಯಿಂದ ಸಿಂಗಪುರ ಹಾಗೂ 6–0ಯಿಂದ ಮಲೇಷ್ಯಾ ತಂಡವನ್ನು ಸೋಲಿಸಿತ್ತು. ಪ್ರತಿ ಗುಂಪಿನಿಂದ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.