| : ಒಲಿಂಪಿಕ್ಸ್‌ಗೆ ಕೋಟಾ ಪಡೆದ ಲವ್ಲಿನಾ ಹಾಂಗ್‌ಝೌ: ವಿಶ್ವ ಚಾಂಪಿಯನ್ ಲವ್ಲಿನಾ ಬೋರ್ಗೊಹೈನ್ ಅವರು ಏಷ್ಯನ್ ಗೇಮ್ಸ್‌ ಬಾಕ್ಸಿಂಗ್‌ (75 ಕೆ.ಜಿ) ಫೈನಲ್ ತಲುಪುವ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಕೋಟಾಕ್ಕೆ ಅರ್ಹತೆ ಪಡೆದರು. ಇನ್ನೊಂದೆಡೆ ಪ್ರೀತಿ ಪವಾರ್ 54 ಕೆ.ಜಿ. ವಿಭಾಗದಲ್ಲಿ ಮಂಗಳವಾರ ಕಂಚಿನ ಪದಕ ಗೆದ್ದುಕೊಂಡರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಬೋರ್ಗೊಹೈನ್ ಅವರು ಚಾಣಾಕ್ಷತೆಯಿಂದ ಹೋರಾಡಿ ಥಾಯ್ಲೆಂಡ್‌ನ ಬೇಸನ್ ಮನಿಕೊನ್ ಅವರನ್ನು 5–0 ಸರ್ವಾನುಮತದ ತೀರ್ಪಿನಿಂದ ಸೋಲಿಸಿದರು. 2024ರ ಒಲಿಂಪಿಕ್ಸ್‌ಗೆ ಈ ಕೂಟದಿಂದ ಅರ್ಹತೆ ಗಿಟ್ಟಿಸಿದ ಭಾರತದ ನಾಲ್ಕನೇ ಬಾಕ್ಸರ್ ಎನಿಸಿದರು. ಮನಿಕೋನ್ ಅವರು ಏಷ್ಯನ್ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತೆಯಾಗಿದ್ದಾರೆ. ಹಾಲಿ ಫ್ಲೈವೇಟ್ ಚಾಂಪಿಯನ್ ಆಗಿರುವ ಚೀನಾದ ಚಾಂಗ್‌ ಯುವಾನ್ ಮತ್ತು ಪ್ರೀತಿ ಮಧ್ಯೆ ಉತ್ತಮ ಹೋರಾಟ ಕಂಡುಬಂದಿತು. ಎಡಚರಾದ ಇಬ್ಬರೂ ಉತ್ತಮ ನೈಪುಣ್ಯ ಪ್ರದರ್ಶಿಸಿದರು. 19 ವರ್ಷದ ಪ್ರೀತಿ, ಒಂದು ಹಂತದಲ್ಲಿ ‘ಡಬಲ್ ಜೇಬ್’, ಎರಡು ಬಲಗೈ ಪ್ರಹಾರದ ಮೂಲಕ ಮೇಲುಗೈ ಸಾಧಿಸುವ ಹಂತಕ್ಕೆ ಹೋಗಿದ್ದರು. ಆದರೆ ಚೀನಾ ಬಾಕ್ಸರ್‌ ಅವರ ಪಂಚ್‌ಗಳು ಪರಿಣಾಮಕಾರಿ ಆಗಿದ್ದವು. ಮೊದಲ ಸುತ್ತಿನಲ್ಲಿ ಐವರ ಪೈಕಿ ನಾಲ್ವರು ತೀರ್ಪುಗಾರರು ಚಾಂಗ್ ಪರ ತೀರ್ಪುನೀಡಿದರು. ಎರಡನೇ ಸುತ್ತಿನಲ್ಲಿ ಪ್ರೀತಿ, ಎದುರಾಳಿಯ ರಕ್ಷಣೆಯನ್ನು ಭೇದಿಸಲು ಪ್ರಯತ್ನಿಸಿದರು. ಆದರೆ ತವರಿನ ಒಕ್ಕೊರಲ ಬೆಂಬಲ ಪಡೆದಿದ್ದ ಚಾಂಗ್‌ ಉತ್ತಮ ರಕ್ಷಣೆ ಪ್ರದರ್ಶಿಸುವಲ್ಲಿ ಹಿಂದೆ ಬೀಳಲಿಲ್ಲ. ಎರಡನೇ ಸುತ್ತಿನಲ್ಲಿ ಪ್ರೀತಿ ಅವರ ತಲೆಯ ಹಿಂಭಾಗಕ್ಕೆ ಗುದ್ದಿದ್ದಕ್ಕೆ ಚಾಂಗ್‌ಗೆ ಕೆಲವು ಬಾರಿ ಎಚ್ಚರಿಕೆ ನೀಡಲಾಯಿತು. ಕೊನೆಯ ಮೂರು ನಿಮಿಷ ಅವರು ಉತ್ತಮ ರಕ್ಷಣಾತ್ಮಕ ಕೌಶಲ ಪ್ರದರ್ಶಿಸಿದರು 75 ಕೆ.ಜಿ. ಸೆಮಿಫೈನಲ್‌ನಲ್ಲಿ ಲವ್ಲಿನಾ ಅವರು ದೀರ್ಘ ‘ರೀಚ್‌’ ಮತ್ತು ನೇರ ಪಂಚ್‌ಗಳ ಮೂಲಕ ಹೋರಾಟವನ್ನು ತಮ್ಮ ನಿಯಂತ್ರಣಕ್ಕೆ ಪಡೆದರು. ಮನಿಕೋನ್ ಅವರು ನಂತರವೂ ಹೆಚ್ಚು ಪ್ರತಿರೋಧ ಪ್ರದರ್ಶಿಸಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.