2023 | ಸ್ಕ್ವಾಷ್‌: ಭಾರತಕ್ಕೆ 3 ಪದಕ ಖಚಿತ ಹಾಂಗ್‌ಝೌ: ಅನುಭವಿ ಸ್ಕ್ವಾಷ್‌ ಆಟಗಾರ ಸೌರವ್ ಘೋಷಾಲ್ ಅವರು ಪುರುಷರ ಸಿಂಗಲ್ಸ್‌ನಲ್ಲಿ ಅಧಿಕಾರಯುತ ಜಯಗಳಿಸಿ ಸೆಮಿಫೈನಲ್‌ಗೆ ದಾಪುಗಾಲಿಟ್ಟರೆ, ಮಿಕ್ಸೆಡ್‌ ಡಬಲ್ಸ್‌ನಲ್ಲೂ ಭಾತದ ಜೋಡಿ ಅದೇ ರೀತಿಯ ವಿಜಯ ದಾಖಲಿಸಿತು. ಏಷ್ಯನ್ ಗೇಮ್ಸ್‌ ಸ್ಕ್ವಾಷ್‌ನಲ್ಲಿ ಭಾರತಕ್ಕೆ ಮೂರು ಪದಕ ಗ್ಯಾರಂಟಿಯಾಗಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಘೋಷಾಲ್ 11–5, 12–10, 11–3 ರಿಂದ ಜಪಾನ್‌ನ ರಿಯುನೊಸುಕೆ ತ್ಸುಕು ಅವರನ್ನು ಸೋಲಿಸಿದರು. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಅನಾಹತ್ ಸಿಂಗ್ ಮತ್ತು ಅಭಯ್ ಸಿಂಗ್ ಅವರಿಗೆ 11–4, 8–11, 11–1 ರಿಂದ ಯಾಂಗ್‌ ಯಿನ್‌ಸೂ–ಡೊಂಗ್ಜುನ್ ಲೀ ಜೋಡಿಯನ್ನು ಸೋಲಿಸಲು ತೆಗೆದುಕೊಂಡಿದ್ದು 32 ನಿಮಿಷಗಳನ್ನಷ್ಟೇ. ಅನಾಹತ್– ಅಭಯ್ ಜೋಡಿಯೂ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು. ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ದೀಪಿಕಾ ಪಳ್ಳಿಕಲ್– ಹರಿಂದರ್ ಪಾಲ್ ಸಿಂಗ್‌ ಸಿಧು 7–11, 11–5, 11–4 ರಿಂದ ಜೆಮಿಕಾ ಅರಿಬಾಡೊ– ಆ್ಯಂಡ್ರು ಗಾರ್ಸಿಯಾ (ಫಿಲಿಪೀನ್ಸ್‌) ಜೋಡಿಯನ್ನು ಸೋಲಿಸಿತು. ಆದರೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ತನ್ವಿ ಖನ್ನಾ 5–11, 6–11, 12–14 ರಿಂದ ಜಪಾನ್‌ನ ಸತೋಮಿ ವತಾನಬೆ ಅವರಿಗೆ ಮಣಿದರು. . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.