| : ಇರಾನ್– ಭಾರತ ಪಂದ್ಯ ಡ್ರಾ ಹಾಂಗ್‌ಝೌ: ಅಗ್ರ ಶ್ರೇಯಾಂಕದ ಭಾರತ ಪುರುಷರ ತಂಡ ಏಷ್ಯನ್ ಗೇಮ್ಸ್‌ ಚೆಸ್‌ನ ಐದನೇ ಸುತ್ತಿನಲ್ಲಿ ಮಂಗಳವಾರ ಇರಾನ್ ಎದುರು 2–2 ‘ಡ್ರಾ’ಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು. ಎರಡನೇ ಶ್ರೇಯಾಂಕದ ಭಾರತ ಮಹಿಳಾ ತಂಡಕ್ಕೆ, ಮಂಗೋಲಿಯಾ ತಂಡದಿಂದ ಪ್ರತಿರೋಧ ಎದುರಾಗಲಿಲ್ಲ. 4–0 ಪರಿಪೂರ್ಣ ಜಯದಕ್ಕಿತು. ಭಾರತ ಪುರುಷರ ಮತ್ತು ಮಹಿಳಾ ತಂಡಗಳು ತಲಾ ಎಂಟು ಮ್ಯಾಚ್‌ ಪಾಯಿಂಟ್ಸ್‌ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿವೆ. ಪುರುಷರ ವಿಭಾಗದಲ್ಲಿ ಇರಾನ್ (9) ಅಗ್ರಸ್ಥಾನದಲ್ಲಿದೆ. ಪುರುಷರ ವಿಭಾಗದಲ್ಲಿ ಮೊದಲ ಬೋರ್ಡ್‌ನಲ್ಲಿ ಆಡಿದ ಪರ್ಹಾಮ್ ಮಘಸುಡ್ಲೂ (ರೇಟಿಂಗ್‌ 2707) ಅವರು ಡಿ.ಗುಕೇಶ್ (2758) ಅವರನ್ನು ಸೋಲಿಸಿದರೆ, ರಮೇಶಬಾಬು ಪ್ರಜ್ಞಾನಂದ (2727) ಎರಡನೇ ಬೋರ್ಡ್‌ನಲ್ಲಿ ಸೆಯದಮೊಹಮದಮೀನ್ ತಬತಬೇಯಿ (2685) ಅವರನ್ನು ಮಣಿಸಿದ್ದರಿಂದ ಸ್ಕೋರ್ ಸಮನಾಯಿತು. ಇರಾನ್‌ನ ಇದಾನಿ ಪೌಯ (2633) ಮತ್ತು ದನೇಶ್ವರ್ ಬರ್ದಿಯಾ (2581) ಅವರು ಕ್ರಮವಾಗಿ ವಿದಿತ್ ಗುಜರಾತಿ (2716) ಮತ್ತು ‍‍ಪಿ.ಹರಿಕೃಷ್ಣ (2711) ಜತೆಗಿನ ಪಂದ್ಯಗಳನ್ನು ‘ಡ್ರಾ’ ಮಾಡಿಕೊಂಡರು. ಮಹಿಳಾ ತಂಡ ವಿಭಾಗದಲ್ಲಿ ಕೋನೇರು ಹಂಪಿ, ವೈಶಾಲಿ ಆರ್‌., ವಂತಿಕಾ ಅಗರವಾಲ್ ಮತ್ತು ಸವಿತಾಶ್ರೀ ಭಾಸ್ಕರ್ ಎಲ್ಲರೂ ಮಂಗೋಲಿಯಾ ಆಟಗಾರ್ತಿಯರ ವಿರುದ್ಧ ತಮ್ಮ ಪಂದ್ಯಗಳನ್ನು ಗೆದ್ದುಕೊಂಡರು. ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಚೀನಾ 2.5–1.5 ರಿಂದ ಕಜಕಸ್ತಾನ ತಂಡವನ್ನು ಸೋಲಿಸಿ ಪಾಯಿಂಟ್ಸ್‌ ಟೇಬಲ್‌ (9 ಅಂಕ) ಅಗ್ರಸ್ಥಾನದಲ್ಲಿ ಮುಂದುವರಿಯಿತು. ಪ್ರತಿ ಸುತ್ತಿನ ಗೆಲುವಿಗೆ ಎರಡು ಮತ್ತು ‘ಡ್ರಾ’ಕ್ಕೆ ಒಂದು ಅಂಕ ನೀಡಲಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.