| ಆರ್ಚರಿ: ವೈಯಕ್ತಿಕ ಕಾಂಪೌಂಡ್‌ ವಿಭಾಗದಲ್ಲಿ ಮೂರು ಪದಕ ಖಚಿತ ಹಾಂಗ್‌ಝೌ: ಓಜಸ್‌ ದೇವತಾಳೆ, ಅಭಿಷೇಕ್ ವರ್ಮಾ ಮತ್ತು ಜ್ಯೋತಿ ಸುರೇಖಾ ಅವರು ಏಷ್ಯನ್‌ ಕ್ರೀಡಾಕೂಟದ ಆರ್ಚರಿ ಸ್ಪರ್ಧೆಯ ವೈಯಕ್ತಿಕ ಕಾಂಪೌಂಡ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸುವ ಮೂಲಕ ಭಾರತಕ್ಕೆ ಮೂರು ಪದಕಗಳನ್ನು ಖಚಿತಪಡಿಸಿದ್ದಾರೆ. ಪುರುಷರ ಅಂತಿಮ ಸುತ್ತಿನಲ್ಲಿ ಓಜಸ್‌ ಮತ್ತು ಅಭಿಷೇಕ್‌ ಮುಖಾಮುಖಿಯಾಗಲಿದ್ದಾರೆ. ಈ ಮೂಲಕ ಏಷ್ಯನ್ ಕ್ರೀಡಾಕೂಟದಲ್ಲಿ ಆರ್ಚರಿಯ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ದೊರೆಯಲಿದೆ. ಮಹಿಳೆಯರ ಕಾಂಪೌಂಡ್‌ ವಿಭಾಗದ ಸೆಮಿಫೈನಲ್‌ನಲ್ಲಿ ಜ್ಯೋತಿಗೆ ಮಣಿದ ಸ್ವದೇಶದ ಅದಿತಿ ಸ್ವಾಮಿ ಅವರು ಕಂಚಿನ ಪದಕಕ್ಕೆ ಪೈಪೋಟಿ ನಡೆಸಲಿದ್ದಾರೆ. ಫೈನಲ್‌ನಲ್ಲಿ ಜ್ಯೋತಿ ಅವರು ದಕ್ಷಿಣ ಕೊರಿಯಾದ ಸೊ ಚೇವನ್ ವಿರುದ್ಧ ಸೆಣಸಾಡುವರು. ಆದರೆ, ವೈಯಕ್ತಿಕ ರಿಕರ್ವ್‌ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿತು. ನಿರೀಕ್ಷೆ ಮೂಡಿಸಿದ್ದ ಅತಾನು ದಾಸ್‌, ಧೀರಜ್‌ ಬೊಮ್ಮದೇವರ ನಿರಾಸೆ ಅನುಭವಿಸಿದರು. ಅಭಿಷೇಕ್‌ ವರ್ಮಾ –ಪಿಟಿಐ ಚಿತ್ರ ಹಾಲಿ ವಿಶ್ವ ಚಾಂಪಿಯನ್ ದೇವತಾಳೆ ಅವರು ಸೆಮಿಫೈನಲ್‌ನಲ್ಲಿ ಏಳನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ಯಾಂಗ್ ಜೇವೊನ್ ವಿರುದ್ಧ 150–146 ಅಂತರದಿಂದ ಜಯ ಸಾಧಿಸಿ ಫೈನಲ್‌ಗೆ ಮುನ್ನಡೆದರು. ಅಭಿಷೇಕ್ ವರ್ಮಾ ಅವರು ಅಗ್ರ ಶ್ರೇಯಾಂಕದ ದಕ್ಷಿಣ ಕೊರಿಯಾದ ಜೂ ಜೇಹೂನ್ ಅವರನ್ನು 147-145ರಿಂದ ಸೋಲಿಸಿ, ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದರು. ಜ್ಯೋತಿ ಸುರೇಖಾ –ಪಿಟಿಐ ಚಿತ್ರ ಕಾಂಪೌಂಡ್‌ ಮತ್ತು ರಿಕರ್ವ್‌ ವಿಭಾಗದಲ್ಲಿ ಭಾರತದ ಪುರುಷರ, ಮಹಿಳೆಯರ ಮತ್ತು ಮಿಕ್ಸೆಡ್‌ ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು, ಪೋಡಿಯಂ ಫಿನಿಶ್‌ಗಾಗಿ ಎದುರು ನೋಡುತ್ತಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.