| ಭಾರತ ಬ್ರಿಜ್‌ ತಂಡಕ್ಕೆ ಬೆಳ್ಳಿ ಹಾಂಗ್‌ಝೌ: ಏಷ್ಯನ್‌ ಕ್ರೀಡಾಕೂಟದ ಬ್ರಿಜ್‌ ಸ್ಪರ್ಧೆಯ ಫೈನಲ್‌ನಲ್ಲಿ ಎಡವಿದ ಭಾರತ ಪುರುಷರ ತಂಡ, ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು. ಶುಕ್ರವಾರ ಕೊನೆಗೊಂಡ ಫೈನಲ್‌ನಲ್ಲಿ ಭಾರತ, 152–238.1 ಪಾಯಿಂಟ್ಸ್‌ಗಳಿಂದ ಹಾಂಗ್‌ಕಾಂಗ್‌ ಎದುರು ಪರಾಭವಗೊಂಡಿತು. ಜಗ್ಗಿ ಶಿವದಾಸಾನಿ, ಸಂದೀಪ್ ಟಕರಾಲ್, ಸುಮಿತ್‌ ಮುಖರ್ಜಿ, ರಾಜೇಶ್ವರ್‌ ತಿವಾರಿ, ರಾಜು ತೊಲಾನಿ ಮತ್ತು ಅಜಯ್‌ ಖರೆ ಅವರನ್ನೊಳಗೊಂಡ ಭಾರತ ತಂಡ, ಆರು ಸುತ್ತುಗಳ ಫೈನಲ್‌ನಲ್ಲಿ ಎದುರಾಳಿಗಳಿಗೆ ಪೈಪೋಟಿ ಒಡ್ಡುವಲ್ಲಿ ವಿಫಲವಾಯಿತು. ಗುರುವಾರ ನಡೆದಿದ್ದ ಮೊದಲ ಮೂರು ಸುತ್ತುಗಳ ಹಣಾಹಣಿ ಬಳಿಕ ಭಾರತ ತಂಡ 1–2 ರಿಂದ ಹಿನ್ನಡೆ ಅನುಭವಿಸಿತ್ತು. ಶುಕ್ರವಾರ ನಡೆದ ನಾಲ್ಕನೇ ಸುತ್ತಿನ ಸ್ಪರ್ಧೆಯನ್ನು 32–42 ರಿಂದ ಕಳೆದುಕೊಂಡಿತು. 1–3 ರಿಂದ ಹಿನ್ನಡೆ ಅನುಭವಿಸಿದ ಭಾರತ ತಂಡ, ಚಿನ್ನದ ಪದಕದ ಆಸೆ ಜೀವಂತವಾಗಿರಿಸಿಕೊಳ್ಳಬೇಕಾದರೆ ಕೊನೆಯ ಎರಡೂ ಸುತ್ತುಗಳನ್ನು ಗೆಲ್ಲಬೇಕಿತ್ತು. ಆದರೆ ನಾಲ್ಕನೇ ಸುತ್ತನ್ನು 38–17 ರಿಂದ ಜಯಿಸಿದ ಹಾಂಗ್‌ಕಾಂಗ್‌ ಸ್ಪರ್ಧಿಗಳು 4–1 ರಿಂದ ಪಂದ್ಯ ಗೆದ್ದು ಬಂಗಾರದ ಪದಕ ಕೊರಳಿಗೇರಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.