| : ಪದಕದತ್ತ ದಿಟ್ಟ ‘ನಡೆ’ ಹ್ವಾಂಗ್‌ಝೌ: ಪದಕದತ್ತ ಹೆಜ್ಜೆಯಿಟ್ಟಿರುವ ಭಾರತ ಪುರುಷರ ಮತ್ತು ಮಹಿಳಾ ತಂಡಗಳು, ಏಷ್ಯನ್ ಗೇಮ್ಸ್‌ ಚೆಸ್‌ನ ಎಂಟನೇ ಸುತ್ತಿನಲ್ಲೂ ಶುಕ್ರವಾರ ಸುಲಭ ಜಯ ಸಾಧಿಸಿದವು. ಪುರುಷರ ತಂಡ 3.5–0.5 ರಿಂದ ದಕ್ಷಿಣ ಕೊರಿಯಾ ತಂಡವನ್ನು ಸುಲಭವಾಗಿ ಸೋಲಿಸಿದರೆ, ಮಹಿಳಾ ತಂಡ 4–0 ಯಿಂದ ಹಾಂಗ್‌ಕಾಂಗ್‌ ಮೇಲೆ ನಿರಾಯಾಸ ಗೆಲುವು ಸಾಧಿಸಿತು. ಅಗ್ರ ಶ್ರೇಯಾಂಕದ ಭಾರತ ಪುರುಷರ ಮತ್ತು ಎರಡನೇ ಶ್ರೇಯಾಂಕದ ಮಹಿಳೆಯರ ತಂಡಗಳು ಎರಡನೇ ಸ್ಥಾನ ಕಾಪಾಡಿಕೊಂಡಿದ್ದು ಪದಕ ಖಚಿತಪಡಿಸಿವೆ. ಶನಿವಾರ ಅಂತಿಮ ಸುತ್ತಿನ ಪಂದ್ಯಗಳು ಉಳಿದಿವೆ. ಪುರುಷರ ವಿಭಾಗದಲ್ಲಿ ಇರಾನ್ (14 ಮ್ಯಾಚ್‌ ಪಾಯಿಂಟ್‌) ಅಗ್ರಸ್ಥಾನದಲ್ಲಿದೆ. ಭಾರತ (13 ಮ್ಯಾಚ್‌ ಪಾಯಿಂಟ್‌) ಎರಡನೇ ಮತ್ತು ಉಜ್ಬೇಕಿಸ್ತಾನ (12) ಮೂರನೇ ಸ್ಥಾನದಲ್ಲಿವೆ. ಚೀನಾ (11) ನಾಲ್ಕನೇ ಸ್ಥಾನದಲ್ಲಿವೆ. ಮಹಿಳಾ ವಿಭಾಗದಲ್ಲಿ, ಅಗ್ರ ಶ್ರೇಯಾಂಕದ ಚೀನಾ (15 ಮ್ಯಾಚ್‌ ಪಾಯಿಂಟ್‌) ಅಗ್ರಸ್ಥಾನ ಕಾಪಾಡಿಕೊಂಡಿದೆ. ಭಾರತ 13 ಮ್ಯಾಚ್‌ ಪಾಯಿಂಟ್ಸ್ ಗಳಿಸಿದೆ. ಕಜಕಸ್ತಾನ (11) ಮೂರನೇ ಮತ್ತು ವಿಯೆಟ್ನಾಂ (10) ನಾಲ್ಕನೇ ಸ್ಥಾನದಲ್ಲಿವೆ. ಗುಕೇಶ್, ಪ್ರಜ್ಞಾನಂದ, ಅರ್ಜುನ್ ಇರಿಗೇಶಿ ಮೊದಲ ಮೂರು ಬೋರ್ಡ್‌ಗಳಲ್ಲಿ ತಮ್ಮ ಪಂದ್ಯಗಳನ್ನು ಗೆದ್ದುಕೊಂಡರೆ, ಪೆಂಟಾಲ ಹರಿಕೃಷ್ಣ ಕೊನೆಯ ಬೋರ್ಡ್‌ನಲ್ಲಿ ತಮಗಿಂತ ಕೆಳಕ್ರಮಾಂಕದ ಆನ್‌ ಹಾಂಗ್‌ಜಿನ್ ಜೊತೆ ಡ್ರಾ ಮಾಡಿಕೊಳ್ಳಬೇಕಾಯಿತು. ಭಾರತ ತಂಡ ಅಂತಿಮ (9ನೇ) ಸುತ್ತಿನಲ್ಲಿ ಫಿಲಿಪೀನ್ಸ್‌ ತಂಡವನ್ನು ಎದುರಿಸಲಿದೆ. ಇರಾನ್‌, ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಮಹಿಳೆಯರ ವಿಭಾಗದಲ್ಲಿ ಹಾರಿಕಾ, ವೈಶಾಲಿ, ವಂತಿಕಾ ಮತ್ತು ಸವಿತಾ ಶ್ರೀ, ಹಾಂಗ್‌ಕಾಂಗ್‌ ಎದುರಾಳಿಗಳ ವಿರುದ್ಧ ಸುಲಭ ಜಯಪಡೆದರು. ಚೀನಾ ಫಿಲಿಪೀನ್ಸ್‌ ವಿರುದ್ಧ, ಕಜಕಸ್ತಾನ, ದಕ್ಷಿಣ ಕೊರಿಯಾ ವಿರುದ್ಧ ಇದೇ ಅಂತರದಲ್ಲಿ (4–0) ಜಯಪಡೆದವು. ಭಾರತ ಮಹಿಳಾ ತಂಡ ಅಂತಿಮ ಸುತ್ತಿನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಆಡಲಿದೆ. ಚೀನಾ ತಂಡ, ಯುಎಇ ವಿರುದ್ಧ ಆಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.