ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಕ್ವಾರ್ಟರ್‌ಗೆ ತಾರಾ, ಆಯುಷ್‌ ನವದೆಹಲಿ: ಭಾರತದ ತಾರಾ ಶಾ ಮತ್ತು ಆಯುಷ್‌ ಶೆಟ್ಟಿ ಅಮೆರಿಕದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದು, ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ, ಬಾಲಕರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಶುಕ್ರವಾರ ನಡೆದ ಬಾಲಕರ ಸಿಂಗಲ್ಸ್‌ನ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಆಯುಷ್‌ ಶೆಟ್ಟಿ 21-16, 21-12 ರಿಂದ ಫಿಲಿಪ್ಪೀನ್ಸ್‌ನ ಜಮಾಲ್ ರಹಮತ್ ಅವರನ್ನು ಮಣಿಸಿದರೆ, ಬಾಲಕಿಯರ ಸಿಂಗಲ್ಸ್‌ನಲ್ಲಿ ತಾರಾ ಶಾ 21-8, 21-7 ರಿಂದ ಜೆಕ್ ಗಣರಾಜ್ಯದ ಲೂಸಿ ಕ್ರುಲೋವಾ ಅವರನ್ನು ಸೋಲಿಸಿ ಮುನ್ನಡೆದರು. ಬಾಲಕರ ಡಬಲ್ಸ್‌ ಜೋಡಿ ದಿವ್ಯಂ ಅರೋರ ಮತ್ತು ಮಯಾಂಕ್‌ 12-21, 10-21 ರಿಂದ ಇಂಡೊನೇಷ್ಯಾದ ಮೊಹಮ್ಮದ್ ಅಲ್ ಫರಿಜಿ ಮತ್ತು ನಿಕೋಲಸ್ ಜೋಕ್ವಿನ್ ಜೋಡಿಗೆ ಹಾಗೂ ತುಷಾರ್‌ ಸುವೀರ್‌ ಮತ್ತು ನಿಕೊಲಸ್‌ ರಾಜ್‌ ಜೋಡಿಯು 14–21, 17–21ರಿಂದ ಮಲೇಷ್ಯಾದ ಬ್ರಿಯಾನ್ ಜೆರೆಮಿ ಗೂಂಟಿಂಗ್ ಮತ್ತು ಆರನ್ ತೈ ಜೋಡಿಗೆ ಮಣಿದರು. ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್ ರಾಜ್‌ ಮತ್ತು ವೈಷ್ಣವಿ ಖಡ್ಕೇಕರ್ 10-21, 20-22 ರಿಂದ ಇಂಡೊನೇಷ್ಯಾದ ಆಡ್ರಿಯನ್‌ ಪ್ರತಮ ಮತ್ತು ಫೆಲಿಶಾ ಅಲ್ಬೆರಾ ಅವರಿಗೆ, ಮತ್ತೊಂದು ಜೋಡಿ ಸಮರವೀರ್‌ ಮತ್ತು ರಾಧಿಕಾ ಶರ್ಮಾ 18-21, 17-21ರಿಂದ ಜಪಾನ್‌ ಕೆಂಟಾ ಮತ್ಸುಕಾವಾ ಮತ್ತು ನಾವೋ ಯಮಕಿತಾ ಅವರ ವಿರುದ್ಧ ಪರಾಭವಗೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.