ದಸರಾ ಕ್ರೀಡಾಕೂಟ: ಉತ್ತರ ಕನ್ನಡ ಹಾಗೂ ಬೆಳಗಾವಿ ತಂಡ ರಾಜ್ಯ ಮಟ್ಟಕ್ಕೆ ಮುಂಡಗೋಡ: ಇಲ್ಲಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಬುಧವಾರ ನಡೆದ ದಸರಾ ವಿಭಾಗ ಮಟ್ಟದ ಪುರುಷರ ಥ್ರೋ ಬಾಲ್‌ ಪಂದ್ಯದಲ್ಲಿ ಉತ್ತರ ಕನ್ನಡ ತಂಡವು ಬೆಳಗಾವಿ ತಂಡವನ್ನು 15-10, 15-09 ಸೆಟ್‌ಗಳಿಂದ ಸೋಲಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು. ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಾರಿಕಾಂಬಾ ಸ್ಪೋರ್ಟ್ಸ್‌ ಕ್ಲಬ್‌, ಉತ್ತರ ಕನ್ನಡ ಥ್ರೋ ಬಾಲ್‌ ಸಂಸ್ಥೆ ವತಿಯಿಂದ ನಡೆದ ಪುರುಷ ಹಾಗೂ ಮಹಿಳಾ ಕೊಕ್ಕೊ, ಥ್ರೋ ಬಾಲ್‌ ಪಂದ್ಯಗಳಿಗೆ ಒಟ್ಟು ಏಳು ಜಿಲ್ಲೆಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಮಹಿಳೆಯರ ಥ್ರೋ ಬಾಲ್‌ ಪಂದ್ಯದಲ್ಲಿ ಬೆಳಗಾವಿ ತಂಡವು ವಿಜಯಪುರ ತಂಡವನ್ನು ಸೋಲಿಸಿ, ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಯಿತು. ಮಹಿಳೆಯರ ಕೊಕ್ಕೊ ಪಂದ್ಯದಲ್ಲಿ ಬೆಳಗಾವಿ ತಂಡದ ಬಾಲಕಿಯರು ವಿಜೇತರಾದರು. ಅಂತಿಮ ಪಂದ್ಯದಲ್ಲಿ ಹಾವೇರಿ ತಂಡವನ್ನು 8-7 ಅಂಕಗಳಿಂದ ಸೋಲಿಸಿತು. ಬಾಲಕಿಯರ ಕೊಕ್ಕೊ ಪಂದ್ಯಾವಳಿ ಹೆಚ್ಚು ತುರುಸಿನಿಂದ ಕೂಡಿತ್ತು. ಪುರುಷರ ಕೊಕ್ಕೊ ಪಂದ್ಯಾವಳಿಯಲ್ಲಿ ಉತ್ತರ ಕನ್ನಡ ಜಿಲ್ಲಾ ತಂಡವು ಬಾಗಲಕೋಟೆ ತಂಡವನ್ನು 3-0 ಅಂಕಗಳಿಂದ ಸೋಲಿಸಿತು. ಬೆಳಿಗ್ಗೆಯಿಂದ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದು ಆತಂಕ ಮೂಡಿಸಿತ್ತು. ನಂತರ ಆಟ ಮುಗಿಯುವವರೆಗೂ ಮಳೆ ಬಿಡುವು ನೀಡಿತ್ತು. ಸಂಘಟಕರಾದ ಸಂಗಮೇಶ ಗೊಟಗೋಡಿ, ಪರುಶುರಾಮ ರಾಣಿಗೇರ, ಪ್ರಮೋದ ಗೊಟಗೋಡಿ, ಶಿವಜ್ಯೋತಿ ಹುದ್ಲಮನಿ, ರಮೇಶ ತಳವಾರ, ಶ್ರೀನಿವಾಸ ಪಾಟೀಲ, ಮಾರುತಿ ಓಂಕಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಹನಮಂತ ವಡ್ಡರ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.