ಸುಶೀಲಾ ಚಾನುಗೆ ಗಾಯ; ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅಲಭ್ಯ ನವದೆಹಲಿ: ಇದೇ 27ರಿಂದ ನ.5 ರವರೆಗೆ ರಾಂಚಿಯಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಗೆ 20 ಸದಸ್ಯರ ಭಾರತ ಮಹಿಳಾ ಹಾಕಿ ತಂಡವನ್ನು ಪ್ರಕಟಿಸಲಾಗಿದ್ದು, ಗಾಯದ ಕಾರಣದಿಂದ ಅನುಭವಿ ಮಿಡ್‌ಫೀಲ್ಡರ್ ಸುಶೀಲಾ ಚಾನು ಅವರಿಗೆ ವಿಶ್ರಾಂತಿ ನೀಡಲಾಗಿದೆ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಅವರು, ಕಳೆದ ವಾರ ನಡೆದ ಹಾಂಗ್‌ಝೌ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿದ್ದರು. ಮೊಣಕಾಲಿನ ನೋವಿನಿಂದ ಬಳಲುತ್ತಿರುವ ಅವರು, ಶೀಘ್ರದಲ್ಲೇ ವೈದ್ಯರನ್ನು ಸಂಪರ್ಕಿಸಲಿದ್ದಾರೆ ಎಂದು ಹಾಕಿ ಇಂಡಿಯಾದ ಮೂಲಗಳು ತಿಳಿಸಿವೆ. ಸುಶೀಲಾ ಸ್ಥಾನಕ್ಕೆ ಬಲ್‌ಜೀತ್‌ ಕೌರ್‌ ಅವಕಾಶ ಪಡೆದಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ತಂಡದಲ್ಲಿದ್ದ ವೈಷ್ಣವಿ ವಿಠಲ್ ಫಾಲ್ಕೆ ಅವರನ್ನು ಶರ್ಮಿಳಾ ದೇವಿ ಜೊತೆಗೆ ಬದಲಿ ಆಟಗಾರ್ತಿಯರಾಗಿ ಹೆಸರಿಸಲಾಗಿದೆ. ಸವಿತಾ ಪೂನಿಯಾ ತಂಡವನ್ನು ಮುನ್ನಡೆಸಲಿದ್ದು, ದೀಪ್ ಗ್ರೇಸ್ ಎಕ್ಕಾ ಉಪ ನಾಯಕಿಯಾಗಿದ್ದಾರೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ, ಜಪಾನ್‌, ಚೀನಾ, ಕೊರಿಯಾ, ಮಲೇಷ್ಯಾ ಮತ್ತು ಥಾಯ್ಲೆಂಡ್‌ ತಂಡಗಳು ಪಾಲ್ಗೊಳ್ಳಲಿವೆ. ಅ.27ರಂದು ಭಾರತ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ ತಂಡವನ್ನು ಎದುರಿಸಲಿದೆ. ಅ.28ರಂದು ಮಲೇಷ್ಯಾ ವಿರುದ್ಧ, ಅ.30ರಂದು ಚೀನಾ ವಿರುದ್ಧ, ಅ.31ರಂದು ಜಪಾನ್‌ ವಿರುದ್ಧ, ನ.2ರಂದು ಕೊರಿಯಾ ವಿರುದ್ಧ ಸೆಣಸಲಿದೆ. ನ.4 ಮತ್ತು 5ರಂದು ಕ್ರಮವಾಗಿ ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಗಳು ನಡೆಯಲಿವೆ. ತಂಡ ಗೋಲ್‌ಕೀಪರ್‌ಗಳು: ಸವಿತಾ ಪೂನಿಯಾ (ನಾಯಕಿ), ಬಿಚು ದೇವಿ ಖರಿಬಮ್ ಡಿಫೆಂಡರ್ಸ್: ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ದೀಪ್ ಗ್ರೇಸ್ ಎಕ್ಕಾ (ಉಪನಾಯಕಿ) ಮಿಡ್‌ಫೀಲ್ಡರ್‌ಗಳು: ನಿಶಾ, ಸಲೀಮಾ, ನೇಹಾ, ನವನೀತ್ ಕೌರ್, ಸೋನಿಕಾ, ಮೋನಿಕಾಜೆ, ಜ್ಯೋತಿ ಕೌರ್‌ ಫಾರ್ವರ್ಡ್ಸ್‌: ಲಾಲ್‌ರೆಮ್ಸಿಯಾಮಿ, ಸಂಗೀತಾ ಕುಮಾರಿ, ದೀಪಿಕಾ, ವಂದನಾ ಕಟಾರಿಯ ಬದಲಿ ಆಟಗಾರರು: ಶರ್ಮಿಳಾ ದೇವಿ, ವೈಷ್ಣವಿ ವಿಠಲ್ ಫಾಲ್ಕೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.