ದೆಹಲಿ ಹಾಫ್ ಮ್ಯಾರಥಾನ್‌: ಡೇನಿಯಲ್, ಅಲ್ಮಾಜ್‌ಗೆ ಚಿನ್ನ ನವದೆಹಲಿ: ಕೀನ್ಯಾದ ಡೇನಿಯಲ್ ಎಬೆನ್ಯೊ ಮತ್ತು ಇಥಿಯೋಪಿಯಾದ ಅಲ್ಮಾಜ್ ಅಯಾನಾ ಅವರು ಭಾನುವಾರ ಇಲ್ಲಿ ನಡೆದ ದೆಹಲಿ ಹಾಫ್ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಎಲೈಟ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಬುಡಾಪೆಸ್ಟ್‌ನಲ್ಲಿ ಈಚೆಗೆ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 10 ಸಾವಿರ ಮೀಟರ್‌ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ 28 ವರ್ಷದ ಎಬೆನ್ಯೊ ಅವರು ಇಲ್ಲಿ 59 ನಿಮಿಷ ಮತ್ತು 27 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಅದೇ ದೇಶದ ಮತ್ತೊಬ್ಬ ಓಟಗಾರ ಚಾರ್ಲ್ಸ್ ಮಟಾಟ (60ನಿ. 5ಸೆ.) ಮತ್ತು ಇಥಿಯೋಪಿಯಾದ ಅಡ್ಡಿಸು ಗೊಬೆನಾ (60ನಿ. 51ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ 10 ಸಾವಿರ ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದ 31 ವರ್ಷದ ಅಯಾನಾ 67 ನಿಮಿಷ 59 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಅವರು 2017ರಲ್ಲಿಯೂ ಇಲ್ಲಿ ಚಾಂಪಿಯನ್‌ ಆಗಿದ್ದರು. ಉಗಾಂಡಾದ ಸ್ಟೆಲ್ಲಾ ಚೆಸಾಂಗ್ (68ನಿ. 28ಸೆ), ಮತ್ತು ಕೀನ್ಯಾದ ವಿಯೋಲಾ ಚೆಪ್‌ಜೆನೊ (69ನಿ. 9ಸೆ) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ‘ಇಲ್ಲಿ ಓಟ ಸುಲಭವಾಗಿರಲಿಲ್ಲ. ಹವಾಮಾನವೂ ಸ್ವಲ್ಪ ಬಿಸಿಯಾಗಿತ್ತು. ದೆಹಲಿ ಹಾಫ್ ಮ್ಯಾರಥಾನ್‌ನಲ್ಲಿ ಓಡುವುದು ಅದ್ಭುತ ಅನುಭವ. ಇಲ್ಲಿಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಸಂಘಟಕರಿಗೆ ಧನ್ಯವಾದ ಹೇಳುತ್ತೇನೆ. ಇಲ್ಲಿನ ಓಟವು ನನ್ನ ಭವಿಷ್ಯದ ಕೂಟಗಳಿಗೆ ಸಿದ್ಧವಾಗಲು ಅನುಕೂಲವಾಗಿದೆ’ ಎಂದು ಅಲ್ಮಾಜ್ ಅಯಾನಾ ಪ್ರತಿಕ್ರಿಯಿಸಿದರು. ‘ದೆಹಲಿ ಹ್ಯಾಫ್‌ ಮ್ಯಾರಥಾನ್‌ನಲ್ಲಿ ರೋಚಕ ಅನುಭವ ಸಿಕ್ಕಿದೆ. ಆದರೆ, ನನ್ನ ಗುರಿಯ ಸಮಯದಿಂದ ನಿರಾಸೆಯಾಗಿದೆ. ಇಲ್ಲಿ ಹೊಸ ದಾಖಲೆ ನಿರೀಕ್ಷೆಯಲ್ಲಿದ್ದೆ. ಮುಂದಿನ ವರ್ಷ ಖಂಡಿತವಾಗಿಯೂ ಅದನ್ನು ಸಾಧಿಸುತ್ತೇನೆ’ ಎಂದು ಡೇನಿಯಲ್ ಎಬೆನ್ಯೊ ಹೇಳಿದರು. ಅಭಿಷೇಕ್‌, ಕವಿತಾ ವೇಗದ ಓಟಗಾರರು: ಅಭಿಷೇಕ್ ಪಾಲ್ (64ನಿ.7ಸೆ) ಮತ್ತು ಕವಿತಾ ಯಾದವ್ (77ನಿ.42ಸೆ) ಅವರು ಕ್ರಮವಾಗಿ ಭಾರತದ ಪುರುಷ ಮತ್ತು ಮಹಿಳೆಯರ ಎಲೈಟ್‌ ವಿಭಾಗದಲ್ಲಿ ವೇಗದ ಓಟಗಾರರಾಗಿ ಹೊರಹೊಮ್ಮಿದರು. ಅಭಿಷೇಕ್ ಅವರು ಹಾಂಗ್‌ಝೌ ಏಷ್ಯನ್ ಕ್ರೀಡಾಕೂಟದ 10,000 ಮೀ ಓಟದಲ್ಲಿ ಬೆಳ್ಳಿ ಪದಕ ಗೆದ್ದ ಕಾರ್ತಿಕ್ ಕುಮಾರ್ ಅವರನ್ನು ಒಂದು ಸೆಕೆಂಡ್‌ ಅಂತರದಲ್ಲಿ ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಕಾರ್ತಿಕ್‌ (64ನಿ. 08ಸೆ), ಸಾವನ್ ಬರ್ವಾಲ್ (64ನಿ. 17ಸೆ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ರಿಮಾ ಪಟೇಲ್‌ (77ನಿ. 48ಸೆ.) ದ್ವಿತೀಯ, ಪೂನಂ ದಿನಕರ್ ಸೋನುನೆ (77 ನಿ. 49ಸೆ) ತೃತೀಯ ಸ್ಥಾನ ಪಡೆದರು. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ಹಾಫ್ ಮ್ಯಾರಥಾನ್‌ಗೆ ಚಾಲನೆ ನೀಡಿದರು. ದೆಹಲಿ ಹಾಫ್ ಮ್ಯಾರಥಾನ್‌ನಲ್ಲಿ ಸಾರ್ವಜನಿಕರು ಪಾಲ್ಗೊಂಡರು –ಪಿಟಿಐ ಚಿತ್ರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.