ಬ್ಯಾಡ್ಮಿಂಟನ್‌: ಆಯುಷ್‌ಗೆ ಕಂಚು ನವದೆಹಲಿ: ಭಾರತದ ಆಯುಷ್‌ ಶೆಟ್ಟಿ ಅವರು ಅಮೆರಿಕದಲ್ಲಿ ನಡೆದ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದುಕೊಂಡರು. ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅಯುಷ್‌ 18–21, 15–21 ರಿಂದ ಇಂಡೊನೇಷ್ಯಾದ ಅಲ್ವಿ ಫರ್ಹಾನ್‌ ಎದುರು ಸೋತರು. ತುರುಸಿನ ಸೆಣಸಾಟ ನಡೆದ ಮೊದಲ ಗೇಮ್‌ನಲ್ಲಿ ಇಬ್ಬರೂ 16–16 ರಿಂದ ಸಮಬಲ ಸಾಧಿಸಿದ್ದರು. ಆದರೆ ನಿರ್ಣಾಯಕ ಘಟ್ಟದಲ್ಲಿ ಮೇಲುಗೈ ಸಾಧಿಸಿದ ಇಂಡೊನೇಷ್ಯಾದ ಆಟಗಾರ ಗೇಮ್‌ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲಿ ಪಾಯಿಂಟ್ಸ್‌ 13–13 ಆಗುವವರೆಗೆ ಆಯುಷ್‌ ಎದುರಾಳಿಗೆ ಪೈಪೋಟಿ ಒಡ್ಡಿದರು. ಅದೇ ಲಯ ಉಳಿಸಿಕೊಳ್ಳುವಲ್ಲಿ ವಿಫಲವಾದ ಅವರು ಸಾಕಷ್ಟು ಸ್ವಯಂಕೃತ ತಪ್ಪುಗಳನ್ನು ಮಾಡಿ, ಎದುರಾಳಿಯ ಗೆಲುವಿನ ಹಾದಿ ಸುಗಮಗೊಳಿಸಿದರು. ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಭಾರತದ 10ನೇ ಆಟಗಾರ ಎಂಬ ಗೌರವ ಆಯುಷ್‌ಗೆ ಒಲಿಯಿತು. ಈ ಟೂರ್ನಿಯಲ್ಲಿ ಭಾರತ ಇದುವರೆಗೆ 11 ಪದಕಗಳನ್ನು ಜಯಿಸಿದೆ. ಸೈನಾ ನೆಹ್ವಾಲ್‌ ಅವರು ಎರಡು ಸಲ (2006 ರಲ್ಲಿ ಬೆಳ್ಳಿ ಮತ್ತು 2008 ರಲ್ಲಿ ಚಿನ್ನ) ಪದಕ ಗೆದ್ದುಕೊಂಡಿದ್ದರು. 2022 ರಲ್ಲಿ ಸ್ಪೇನ್‌ನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಎಸ್‌.ಶಂಕರ್‌ ಮುತ್ತುಸ್ವಾಮಿ ಸುಬ್ರಮಣ್ಯನ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.