ಏಷ್ಯನ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಹಾಂಗ್‌ಝೌ: ಭಾರತದ ಕ್ರೀಡಾಪಟುಗಳ ಪಾಲಿಗೆ ಅವಿಸ್ಮರಣೀಯವಾದ 19ನೇ ಏಷ್ಯನ್ ಕ್ರೀಡಾಕೂಟಕ್ಕೆ ಭಾನುವಾರ ತೆರೆಬಿತ್ತು. ಸಂಜೆ ನಡೆದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಚೀನಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ತಂತ್ರಜ್ಞಾನದ ಚಮತ್ಕಾರಗಳು ಮೇಳೈಸಿದವು. 80,000 ಪ್ರೇಕ್ಷಕರಿಗೆ ಸ್ಥಳಾವಕಾಶವಿರುವ ‘ಬಿಗ್‌ ಲೋಟಸ್‌’ ಕ್ರೀಡಾಂಗಣದಲ್ಲಿ 75 ನಿಮಿಷಗಳವರೆಗೆ ನಡೆದ ಧ್ವನಿ, ಬೆಳಕಿನ ಅದ್ಭುತ ಪ್ರದರ್ಶನ, ಲೇಸರ್‌ ಷೋ, ಡಿಜಿಟಲ್ ಟರ್ಫ್‌ ಮೇಲಿನ ತ್ರೀಡಿ ಮೋಡಿ ಗಮನ ಸೆಳೆದವು. 45 ರಾಷ್ಟ್ರಗಳ ಅಥ್ಲೀಟುಗಳು ಎರಡು ವಾರಗಳ ಕಾಲ ನಡೆದ ಕ್ರೀಡಾ ಹಬ್ಬಕ್ಕೆ ವಿದಾಯ ಹೇಳಿದರು. ಸಮಾರೋಪ ಸಮಾರಂಭ, ಕ್ರೀಡೆ ಮತ್ತು ಸಂಸ್ಕೃತಿಯ ಸಮ್ಮಿಳಿತದಂತೆ ಇತ್ತು. ಚೀನಾ ಪ್ರಧಾನಿ ಷಿ ಜಿನ್ ಪಿಂಗ್ ಮತ್ತು ಗಣ್ಯರ ಸಮ್ಮುಖದಲ್ಲಿ ಏಷ್ಯ ಒಲಿಂಪಿಕ್‌ ಕೌನ್ಸಿಲ್‌ನ (ಒಸಿಎ) ಹಂಗಾಮಿ ಮುಖ್ಯಸ್ಥ ರಣಧೀರ್ ಸಿಂಗ್ ಅವರು 19ನೇ ಕ್ರೀಡೆಗಳ ಮುಕ್ತಾಯವನ್ನು ಘೋಷಿಸಿದರು. ‘ಏಷ್ಯದ ಯುವಜನತೆ ಏಷ್ಯನ್‌ ಕ್ರೀಡಾಕೂಟವನ್ನು ಭ್ರಾತೃತ್ವದ ಸ್ಪೂರ್ತಿ ಮತ್ತು ಮಾನವೀಯತೆಯ ಒಳಿತಿಗಾಗಿ ಆಚರಿಸಲಿ’ ಎಂದು ಸಿಂಗ್ ಹೇಳಿದರು. ಸೆಪ್ಟೆಂಬರ್ 23ರ ಉದ್ಘಾಟನೆ ಸಮಾರಂಭಕ್ಕೆ ಹೋಲಿಸಿದರೆ, ಸಮಾರೋಪ ಸಮಾರಂಭದಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿತ್ತು. ಭಾಗವಹಿಸಿದ ರಾಷ್ಟ್ರಗಳ ಧ್ವಜಧಾರಿಗಳು ಮೊದಲು ಸಾಲಿನಲ್ಲಿ ಕ್ರೀಡಾಂಗಣಕ್ಕೆ ಬಂದರು. ನಂತರ ಅಥ್ಲೀಟುಗಳು, ಅಧಿಕಾರಿಗಳು ಅವರ ಜೊತೆಗೂಡಿದರು. ಹಾಕಿ ತಂಡದ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್ ಅವರು ಭಾರತದ ಧ್ವಜಧಾರಿಯಾಗಿದ್ದರು. ಭಾರತದ ಸುಮಾರು 100 ಅಥ್ಲೀಟುಗಳು ಮತ್ತು ಅಧಿಕಾರಿಗಳು ಪರೇಡ್‌ನಲ್ಲಿ ಭಾಗಿಯಾದರು. ಹಲವರು ಈ ಮೊದಲೇ ತವರಿಗೆ ಹೋಗಿದ್ದರು. ಹಬ್ಬ ಮುಗಿದ ನಂತರ ಕಾಣುವ ವಿಷಣ್ಣ ರೀತಿಯ ವಾತಾವರಣದಲ್ಲಿ, ಮೊದಲ ಏಷ್ಯನ್ ಗೇಮ್ಸ್‌ನ ಧ್ವಜ, ಜ್ಯೋತಿ ಮತ್ತು ಒಸಿಎ ಧ್ವಜವನ್ನು ಜಪಾನ್‌ನ ನಗೋಯಾ ಐಚಿ ಗವರ್ನರ್‌ ಅವರಿಗೆ ಹಸ್ತಾಂತರಿಸಲಾಯಿತು. ನಗೋಯಾ ಮುಂದಿನ ಕ್ರೀಡೆಗಳ ಆತಿಥ್ಯ ವಹಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.