ಫಿಡೆ ರೇಟೆಡ್ ಅಖಿಲ ಭಾರತ ಚೆಸ್ ಟೂರ್ನಿ: ಪ್ರಶಸ್ತಿ ಗೆದ್ದ ಕೊಡಗಿನ ಆಗಸ್ಟಿನ್ ಮಂಗಳೂರು: ಕುತೂಹಲಕರ ತಿರುವುಗಳನ್ನು ಕಂಡ ಫಿಡೆ ರೇಟೆಡ್ ಅಖಿಲ ಭಾರತ ಚೆಸ್ ಟೂರ್ನಿಯ ಪ್ರಶಸ್ತಿಯನ್ನು ಕೊಡಗಿನ ಆಗಸ್ಟಿನ್ ಎ ತಮ್ಮದಾಗಿಸಿಕೊಂಡರು. ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ, ನಗರದ ಪುರಭವನದಲ್ಲಿ ಆಯೋಜಿಸಿದ್ದ ಟೂರ್ನಿಯ ಕೊನೆಯ ದಿನವಾದ ಶನಿವಾರ 9ನೇ ಸುತ್ತಿನಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್‌, ತಮಿಳುನಾಡಿನ ರಾಮನಾಥನ್ ಬಾಲಸುಬ್ರಹ್ಮಣ್ಯಂ ಅವರನ್ನು ಆಗಸ್ಟಿನ್‌ ಮಣಿಸಿದರು. ತಮಿಳುನಾಡಿನ ಲೋಕೇಶ್ ಎನ್‌, ಸ್ವರ್ಣಮಾಲ, ರಾಹುಲ್ ಕೆ, ಮಹಾರಾಷ್ಟ್ರದ ಇಂದ್ರಜೀತ್ ಮಹೀಂದ್ರಕರ್‌, ಆದಿತ್ಯ ಸಾವಳ್ಕರ್ ಮತ್ತು ಕರ್ನಾಟಕದ ಸುಶಾಂತ್ ವಾಮನ್ ಶೆಟ್ಟಿ ತಲಾ 7.5 ಪಾಯಿಂಟ್ ಗಳಿಸಿದರು. ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಲೋಕೇಶ್ ಮತ್ತು ಇಂದ್ರಜೀತ್ ಮಹೀಂದ್ರಕರ್ ಕ್ರಮವಾಗಿ ರನ್ನರ್ ಅಪ್ ಮತ್ತು 3ನೇ ಸ್ಥಾನ ಗಳಿಸಿದರು. ಶುಕ್ರವಾರ 8ನೇ ಸುತ್ತು ಮುಕ್ತಾಯಕ್ಕೆ ಆಗಸ್ಟಿನ್‌, ರಾಮನಾಥನ್ ಮತ್ತು ಲೋಕೇಶ್ ಅಗ್ರಸ್ಥಾನದಲ್ಲಿದ್ದರು. ಹೀಗಾಗಿ ಕೊನೆಯ ದಿನದ ಪಂದ್ಯಗಳು ಕುತೂಹಲ ಕೆರಳಿಸಿದ್ದವು. ತಮಗಿಂತ ಹೆಚ್ಚು ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ರಾಮನಾಥನ್ ವಿರುದ್ಧ ಜಯ ಸಾಧಿಸುವುದರೊಂದಿಗೆ ಆಗಸ್ಟಿನ್ ಹಾದಿ ಸುಗಮವಾಯಿತು. ಟೂರ್ನಿಯಲ್ಲಿ ರಾಮನಾಥನ್‌ಗೆ 5 ಮತ್ತು ಆಗಸ್ಟಿನ್‌ಗೆ 7ನೇ ಶ್ರೇಯಾಂಕ ನೀಡಲಾಗಿತ್ತು. ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದ 2ನೇ ಶ್ರೇಯಾಂಕಿತ ಲೋಕೇಶ್‌ಗೆ, ಅಗ್ರ ಶ್ರೇಯಾಂಕದ ಸ್ಥಳೀಯ ಆಟಗಾರ ಗಹನ್ ಎಂ.ಜಿ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಳ್ಳಲಷ್ಟೇ ಸಾಧ್ಯವಾಯಿತು. 9ನೇ ಸುತ್ತಿನ ಫಲಿತಾಂಶಗಳು ಕರ್ನಾಟಕದ ಆಗಸ್ಟಿನ್‌ಗೆ ತಮಿಳುನಾಡಿನ ರಾಮನಾಥನ್ ಬಾಲಸುಬ್ರಹ್ಮಣ್ಯಂ ವಿರುದ್ಧ ಜಯ; ಮಹಾರಾಷ್ಟ್ರದ ಇಂದ್ರಜೀತ್ ಮಹೀಂದ್ರಕರ್‌ಗೆ ತೆಲಂಗಾಣದ ನಾಗಸಾಯ್‌ ಸಾರ್ಥಕ್ ವಿರುದ್ಧ, ತಮಿಳುನಾಡಿನ ರಾಹುಲ್‌ಗೆ ಕೇರಳದ ಶಾರ್ಶಾ ಬೇಕರ್ ವಿರುದ್ಧ, ಮಹಾರಾಷ್ಟ್ರದ ಆದಿತ್ಯ ಸಾವಳ್ಕರ್‌ಗೆ ತಮಿಳುನಾಡಿನ ಮುಕುಂದ ವಿರುದ್ಧ, ಕರ್ನಾಟಕದ ಸುಶಾಂತ್ ವಾಮನ್ ಶೆಟ್ಟಿಗೆ ಕರ್ನಾಟಕದ ಶ್ರೀಯಾನ ಮಲ್ಯ ವಿರುದ್ಧ, ತಮಿಳುನಾಡಿನ ಸ್ವರ್ಣಮಾಲಾಗೆ ಕರ್ನಾಟಕದ ಹರ್ಮನ್ ಡಯಾನ್ ಸಲ್ಡಾನ ವಿರುದ್ಧ ಗೆಲುವು; ಕೇರಳದ ಅನಿಲ್‌ ಕುಮಾರ್‌ಗೆ ತಮಿಳುನಾಡಿನ ಸುರೇಂದ್ರ ಸತೀಶ್ ವಿರುದ್ಧ, ಕರ್ನಾಟಕದ ಸಿದ್ಧಾಂತ್ ಪೂಂಜಾಗೆ ತಮಿಳುನಾಡಿನ ಶಿವ ಆದಿತ್ಯನ್ ಎದುರು, ಕೇರಳದ ಅಹಜ್‌ಗೆ ತಮಿಳುನಾಡಿನ ಕವಿನ್ ವಿಜಯಕುಮಾರ್ ಎದುರು, ಕರ್ನಾಟಕದ ಸುಮಿತ್ ಕುಮಾರ್‌ಗೆ ಕೇರಳದ ಆರ್ಯ ಮಲ್ಲಾರ್‌ ಎದುರು, ಕರ್ನಾಟಕದ ನಿರಂಜನ್ ವಾರಿಯರ್‌ಗೆ ಕರ್ನಾಟಕದ ರವೀಶ್ ಕೋಟೆ ಎದುರು, ಕೇರಳದ ಜಾಯ್‌ ಲಾಜರ್‌ಗೆ ಕರ್ನಾಟಕದ ಮ್ಯಾಥ್ಯೂ ಜೋಸೆಫ್ ಎದುರು ಗೆಲುವು; ತಮಿಳುನಾಡಿನ ಲೋಕೇಶ್ ಎನ್‌ ಮತ್ತು ಕರ್ನಾಟಕದ ಗಹನ್ ಎಂ.ಜಿ ನಡುವಿನ ಪಂದ್ಯ ಡ್ರಾ; ತಮಿಳುನಾಡಿನ ನಿಗಶ್ ಜಿ ಮತ್ತು ಕೃಪೇಶ್ ಐ, ಕರ್ನಾಟಕದ ಮೇಧಾಂಶ್‌ ರಾಠಿ ಮತ್ತು ಕರ್ನಾಟಕದ ಲಕ್ಷಿತ್ ಸಾಲಿಯಾನ್‌ ನಡುವಿನ ಪಂದ್ಯ ಡ್ರಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.