ಮಹಿಳಾ ಹಾಕಿ: ಒಲಿಂಪಿಕ್ಸ್‌ ಅರ್ಹತಾ ಟೂರ್ನಿ ರಾಂಚಿಗೆ ಸ್ಥಳಾಂತರ ನವದೆಹಲಿ: ಭಾರತ ಮಹಿಳೆಯರ ಹಾಕಿ ತಂಡವು ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದುಕೊಂಡರೂ 2023ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲು ವಿಫಲವಾಗಿತ್ತು. ಇದೀಗ ಭಾರತ ತಂಡಕ್ಕೆ ಮತ್ತೊಂದು ಅವಕಾಶ ಸ್ವದೇಶದಲ್ಲೇ ಲಭಿಸಿದೆ. ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಎಚ್), ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯನ್ನು ಚೀನಾದ ಚಾಂಗ್‌ಝೌನಿಂದ ರಾಂಚಿಗೆ ಸ್ಥಳಾಂತರಿಸಿದೆ. 2024ರ ಜನವರಿ 13ರಿಂದ 19ರವರೆಗೆ ಜಾರ್ಖಂಡ್‌ನ ರಾಂಚಿಯ ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋ ಟರ್ಫ್ ಹಾಕಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಭಾರತ ಸೇರಿದಂತೆ ಒಟ್ಟು ಎಂಟು ದೇಶಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಅಗ್ರ ಮೂರು ಸ್ಥಾನಗಳನ್ನು ಪಡೆಯುವ ತಂಡಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿವೆ. ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ತಂಡವು ಸೆಮಿಫೈನಲ್‌ನಲ್ಲಿ 0–4ರಿಂದ ಚೀನಾ ವಿರುದ್ಧ ಮುಗ್ಗರಿಸಿತ್ತು. ಕಂಚಿನ ಪದಕಕ್ಕೆ ನಡೆದ ಪಂದ್ಯದಲ್ಲಿ 2–1ರಿಂದ ಜಪಾನ್‌ ತಂಡವನ್ನು ಮಣಿಸಿತ್ತು. ಚಿನ್ನ ಗೆದ್ದ ಚೀನಾ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದಿತ್ತು. ‘ನಮ್ಮ ಆಟಗಾರ್ತಿಯರಿಗೆ ಇದು ದೊಡ್ಡ ಟೂರ್ನಿ. ರಾಂಚಿಯಲ್ಲಿ ಟೂರ್ನಿ ನಡೆಯುವ ಸುದ್ದಿ ಕೇಳಿ ಸಂತೋಷವಾಯಿತು. ನಮ್ಮನ್ನು ಬೆಂಬಲಿಸುತ್ತಿರುವ ಭಾರತದ ಹಾಕಿ ಅಭಿಮಾನಿಗಳ ಸಮ್ಮುಖದಲ್ಲಿ ಉತ್ತಮ ಪ್ರದರ್ಶನ ತೋರುತ್ತೇವೆ’ ಎಂದು ಭಾರತ ಹಾಕಿ ತಂಡದ ನಾಯಕಿ ಸವಿತಾ ಪುನಿಯಾ ಪ್ರತಿಕ್ರಿಯಿಸಿದ್ದಾರೆ. ಭಾರತ ತಂಡವು ರಾಂಚಿಯಲ್ಲಿ ಇದೇ 27ರಿಂದ ನ. 5ರವರೆಗೆ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಆಡಲಿದೆ. ಅಲ್ಲಿ ಜಪಾನ್, ಚೀನಾ, ಕೊರಿಯಾ, ಮಲೇಷ್ಯಾ ಮತ್ತು ಥಾಯ್ಲೆಂಡ್ ತಂಡಗಳನ್ನು ಎದುರಿಸಲಿದೆ. ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ತಯಾರಾಗಲು ಇದು ಸಹಾಯವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.