ಏಷ್ಯನ್ ಶೂಟಿಂಗ್‌ ಚಾಂಪಿಯನ್‌ಷಿಪ್‌: ಒಲಿಂಪಿಕ್ ಕೋಟಾ ಪಡೆದ ಅನೀಶ್‌ ನವದೆಹಲಿ: ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಅನೀಶ್ ಭಾನವಾಲಾ ಅವರು ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ 25 ಮೀ. ರ‍್ಯಾಪಿಡ್‌ ಪಿಸ್ತೂಲ್‌ ಫೈರ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದರು. ಜೊತೆಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾ ಸ್ಥಾನ ಗಿಟ್ಟಿಸಿದ ಭಾರತದ 12ನೇ ಶೂಟರ್‌ ಎನಿಸಿದರು. ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ ಸೋಮವಾರ ಕರ್ನಾಲ್‌ನ 21 ವರ್ಷದ ಶೂಟರ್‌ ಫೈನಲ್‌ನಲ್ಲಿ 28 ಗುರಿಗಳೊಂದಿಗೆ ಮೂರನೇ ಸ್ಥಾನ ಪಡೆದರು. ಜಪಾನ್‌ನ ದೈ ಯೊಶಿಯೊಕಾ ಬೆಳ್ಳಿಯ ಪದಕ ಗೆದ್ದುಕೊಂಡರು. ಸ್ಥಳೀಯ ಫೆವರೀಟ್‌ ಲೀ ಗುನ್‌ಹಿಯೊಕ್ ಅವರು 34ರ ಸ್ಕೋರ್‌ ಗಳಿಸಿ ಚಿನ್ನ ಗೆದ್ದರು. ಕ್ವಾಲಿಫಿಕೇಷನ್‌ ಹಂತದಲ್ಲೇ ಮೂರನೇ ಸ್ಥಾನ ಪಡೆಯುವ ಮೂಲಕ ಭಾನವಾಲಾ ಅವರು ಪ್ಯಾರಿಸ್ ಕ್ರೀಡೆಗಳಿಗೆ ಸ್ಥಾನ ಖಚಿತಪಡಿಸಿಕೊಂಡರು. ಆರು ಮಂದಿಯ ಫೈನಲ್‌ನಲ್ಲಿ ಮೂವರು ಚೀನಾ ಶೂಟರ್‌ಗಳಿದ್ಚದರು. ಲೀ ಮತ್ತು ದೈ ಅವರು ಈ ಟೂರ್ನಿಗಿಂತ ಮೊದಲೇ ಬೇರೆ ಟೂರ್ನಿಗಳಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಕಾರಣ ಅನೀಶ್ ಹಾದಿ ಸುಗಮವಾಯಿತು. ವಿಜಯವೀರ್ ಸಿಧು ಒಟ್ಟಾರೆ 10ನೇ ಸ್ಥಾನ ಪಡೆದರೆ, ಆದರ್ಶ್‌ ಸಿಂಗ್‌ 25ನೇ ಸ್ಥಾನಕ್ಕೆ ಸರಿದರು. ಪುರುಷರ ಟ್ರ್ಯಾಪ್‌ ತಂಡ ವಿಭಾಗದಲ್ಲಿ ಭಾರತ ಬೆಳ್ಳಿಯ ಪದಕ ಪಡೆಯಿತು. ಝೊರಾವರ್ ಸಿಂಗ್‌ ಸಂಧು (119), ಕಿನಾನ್ ಚೆನೈ (111), ಪ್ರಥ್ವಿರಾಜ್ ತೊಂಡೈಮನ್ (111) ಅವರಿದ್ದ ತಂಡ 341 ಪಾಯಿಂಟ್ಸ್‌ ಕಲೆಹಾಕಿ ಎರಡನೇ ಸ್ಥಾನ ಪಡೆದರೆ, ಚಿನ್ನ ಕತಾರ್ ತಂಡದ ಪಾಲಾಯಿತು. ಇರಾನ್ ಕಂಚಿನ ಪದಕ ಗಳಿಸಿತು. ಭಾರತ ಈ ಕೂಟದಲ್ಲಿ ಎಂಟು ಚಿನ್ನದ ಪದಕ ಒಳಗೊಂಡಂತೆ ಒಟ್ಟು 30 ಪದಕಗಳನ್ನು ಗೆದ್ದುಕೊಂಡಿದೆ. ಭಾನವಾಲಾ ಅವರು ಚಾಂಗ್ವಾನ್‌ನಲ್ಲಿ ಒಲಿಂಪಿಕ್‌ ಕೋಟಾ ಪಡೆದ ಭಾರತದ ಐದನೇ ಶೂಟರ್‌ ಎನಿಸಿದರು. ಮಹಿಳೆಯರ ವಿಭಾಗದ ಟ್ರ್ಯಾಪ್‌ ಸ್ಪರ್ಧೆಯಲ್ಲಿ ರಾಜೇಶ್ವರಿ ಕುಮಾರಿ ಮತ್ತು ಶಗುನ್ ಚೌಧರಿ (ರ‍್ಯಾಂಕಿಂಗ್‌ ಪಾಯಿಂಟ್ಸ್‌ಗೆ ಸ್ಪರ್ಧಿಸಿದ್ದರು) ಕ್ರಮವಾಗಿ 108 ಮತ್ತು 107 ಸ್ಕೋರ್‌ನೊಡನೆ ಏಳು ಮತ್ತು ಎಂಟನೇ ಸ್ಥಾನ ಪಡೆದರು. ಇವರು ಪದಕ ಆಕಾಂಕ್ಷಿಯಾಗಿರಲಿಲ್ಲ. ರ‍್ಯಾಂಕಿಂಗ್ ಪಾಯಿಂಟ್ಸ್‌ ಹೆಚ್ಚಿದಲು ಕಣಕ್ಕೆ ಇಳಿದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.