ಫಿಡೆ ಗ್ರ್ಯಾಂಡ್‌ ಸ್ವಿಸ್ ಚೆಸ್‌ ಟೂರ್ನಿ: ಜಂಟಿ ಮುನ್ನಡೆಯಲ್ಲಿ ಅರ್ಜುನ್ ಇರಿಗೇಶಿ ಐಲ್‌ ಆಫ್‌ ಮ್ಯಾನ್ (ಯುಕೆ): ಕಜಕಸ್ತಾನದ ರಿನತ್ ಜಮಬಯೇವ್ ಅವರನ್ನು ಸೋಮವಾರ ಸೋಲಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಫಿಡೆ ಗ್ರ್ಯಾಂಡ್‌ ಸ್ವಿಸ್‌ ಚೆಸ್‌ ಟೂರ್ನಿಯ ಐದನೇ ಸುತ್ತಿನ ನಂತರ ಇತರ ಇಬ್ಬರು ಆಟಗಾರರ ಜೊತೆ ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಯಶಸ್ಸಿನ ಓಟ ಮುಂದುವರಿಸಿರುವ ಇರಿಗೇಶಿ ಅವರು ರಷ್ಯಾದ ಆ್ಯಂಡೆ ಇಸಿಪೆಂಕೊ ಮತ್ತು ಅಮೆರಿಕದ ಹಿಕರಾರು ನಕಾಮುರಾ ಜೊತೆ ತಲಾ ನಾಲ್ಕು ಪಾಯಿಂಟ್ಸ್‌ ಹಂಚಿಕೊಂಡಿದ್ದಾರೆ. ಇಸಿಪೆಂಕೊ ಫಿಡೆ ಧ್ವಜದಡಿ ಆಡುತ್ತಿದ್ದಾರೆ. ನಕಾಮುರಾ ಅವರು ಸರ್ಬಿಯಾದ ಅಲೆಕ್ಸಿ ಸರನಾ ಅವರನ್ನು ಸೋಲಿಸಿದರೆ, ಇಸಿಪೆಂಕೊ ಅವರು ಮೊದಲ ಬೋರ್ಡ್‌ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ (3.5) ಅವರನ್ನು ಸೋಲಿಸಿದರು. ಇರಿಗೇಶಿ 69 ನಡೆಗಳಲ್ಲಿ ಕಜಕಸ್ತಾನದ ಆಟಗಾರನನ್ನು ಸೋಲಿಸಿದರು. ಓಪನ್ ವಿಭಾಗದಲ್ಲಿ ತುರುಸಿನ ಪೈಪೋಟಿ ಕಂಡುಬಂದಿದೆ. ಭಾರತದ ವಿದಿತ್‌ ಗುಜರಾತಿ ಸೇರಿದಂತೆ 16 ಆಟಗಾರರು ತಲಾ 3.5 ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಮೊದಲ 15 ಬೋರ್ಡ್‌ಗಳಲ್ಲಿ ಮೂರರಲ್ಲಿ ಮಾತ್ರ ನಿರ್ಣಾಯಕ ಫಲಿತಾಂಶಗಳು ಬಂದವು. ಉಳಿದ 12 ಪಂದ್ಯಗಳು ‘ಡ್ರಾ’ದಲ್ಲಿ ಅಂತ್ಯಕಂಡವು. ಸತತ ಮೂರು ಪಂದ್ಯಗಳನ್ನು ಗೆದ್ದುಕೊಂಡಿದ್ದ ವಿದಿತ್ ಅವರ ಓಟಕ್ಕೆ ರಷ್ಯಾದ ಎವ್ಗೆನಿ ನಜೆರ್ ಅವರು ‘ಡ್ರಾ’ ಮೂಲಕ ಕಡಿವಾಣ ಹಾಕಿದರು. ಗುಕೇಶ್‌ಗೆ ಹಿನ್ನಡೆ: ಭಾರತದ ಅಗ್ರಮಾನ್ಯ ಆಟಗಾರ ಡಿ.ಗುಕೇಶ್ ಅವರು ಮತ್ತೊಮ್ಮೆ ಹಿನ್ನಡೆ ಕಂಡು ಸ್ವದೇಶದ ಎಸ್‌.ಎಲ್‌.ನಾರಾಯಣನ್ ಎದುರು ಸೋಲನುಭವಿಸಿದರು. ಈ ಮೂಲಕ, ಮೊದಲ ಮೂರು ಸ್ಥಾನಗಳಲ್ಲಿ ಒಂದರಲ್ಲಿ ಕಾಣಿಸಿಕೊಳ್ಳುವ ಗುಕೇಶ್ ಆಸೆ ದೂರವಾಗಿದೆ. ಇದು ಕೇರಳದ ಆಟಗಾರನ ಎದುರು ಗುಕೇಶ್‌ಗೆ ಎರಡು ವಾರಗಳಲ್ಲಿ ಎರಡನೇ ಸೋಲು. ಈ ಟೂರ್ನಿಗೆ ಮೊದಲು ಕತಾರ್‌ ಓಪನ್‌ ಟೂರ್ನಿಯಲ್ಲೂ ಗುಕೇಶ್, ಇದೇ ಆಟಗಾರನ ಎದುರು ಸೋಲನುಭವಿಸಿದ್ದರು. ಪಿ.ಹರಿಕೃಷ್ಣ ಅವರು ಉಕ್ರೇನ್‌ನ ರಸ್ಲಾನ್ ಪೊಮೊಮರಿವ್ ಜೊತೆ ಡ್ರಾ ಮಾಡಿಕೊಂಡರೆ, ಭಾರತದ ಆಟಗಾರರ ನಡುವಿನ ಸೆಣಸಾಟದಲ್ಲಿ ಅರವಿಂದ ಚಿದಂಬರಮ್ ಮತ್ತು ನಿಹಾಲ್ ಸರಿನ್ ಸಹ ಪಾಯಿಂಟ್‌ ಹಂಚಿಕೊಂಡರು. ಇರಾನ್‌ನ ಪರ್ಹಾಮ್ ಮಘ್‌ಸೂಡ್ಲೂ ಇನ್ನೊಂದು ಪಂದ್ಯದಲ್ಲಿ ಭಾರತದ ರೌನಕ್ ಸಾಧ್ವಾನಿ ಅವರನ್ನು ಸೋಲಿಸಿದರು. ಪ್ರಜ್ಞಾನಂದ, ಅಭಿಜಿತ್‌ ಗುಪ್ತಾ ಮತ್ತು ಮುರಳಿ ಕಾರ್ತಿಕೇಯನ್ ಅವರೂ ತಮ್ಮ ಎದುರಾಳಿಗಳ ಜೊತೆ ಪಾಯಿಂಟ್‌ ಹಂಚಿಕೊಂಡರು. ಮಹಿಳಾ ವಿಭಾಗದಲ್ಲಿ ಆರ್‌.ವೈಶಾಲಿ ಯಶಸ್ಸಿನ ಓಟ ಮುಂದುವರಿಸಿ, ಎರಡನೇ ಬೋರ್ಡ್‌ನಲ್ಲಿ ತಮಗಿಂತ ಹೆಚ್ಚಿನ ರೇಟೆಡ್‌ ಆಟಗಾರ್ತಿ ಆನ್ನಾ ಮುಝಿಚುಕ್ ಎದುರು ಸುಲಭ ‘ಡ್ರಾ’ ಸಾಧಿಸಿದರು. ನಾಲ್ಕನೇ ಸುತ್ತಿನಲ್ಲಿ ಅವರು, ಅನ್ನಾ ಸೋದರಿ ಮರಿಯಾ ಅವರನ್ನು ಮಣಿಸಿದ್ದರು. ವೈಶಾಲಿ ಸಂಭವನೀಯ ಐದರಲ್ಲಿ ನಾಲ್ಕು ಪಾಯಿಂಟ್ಸ್ ಕಲೆಹಾಕಿ ಅನ್ನಾ ಮತ್ತು ಅಗ್ರ ಶ್ರೇಯಾಂಕದ ರಷ್ಯಾ ಆಟಗಾರ್ತಿ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಅವರ ಜೊತೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಕಜಕಸ್ತಾನದ ಬಿಬಿಸಾರಾ ಅಸ್ಸುಬಯೇವಾ ಅವರು 4.5 ಅಂಕ ಸಂಗ್ರಹಿಸಿ ಏಕಾಂಗಿಯಾಗಿ ಮುನ್ನಡೆ ಸಾಧಿಸಿದ್ದಾರೆ. ಅವರಯ ಐದನೇ ಸುತ್ತಿನಲ್ಲಿ ಚೀನಾದ ತಾನ್ ಝೊಂಗ್‌ಯಿ ಅವರನ್ನು ಸೋಲಿಸಿದರು.‌ ಡಿ.ಹಾರಿಕಾ (2.5), ಸ್ವದೇಶದ ದಿವ್ಯಾ ದೇಶಮುಖ್ ಅವರನ್ನು ಸೋಲಿಸಿದರು. ಬಿ.ಸವಿತಾ ಶ್ರೀ ಮತ್ತು ವಂತಿಕಾ ಅಗರವಾಲ್ ಕ್ರಮವಾಗಿ ಮಾಯಿ ನರ್ವಾ (ಎಸ್ಟೊನಿಯಾ) ಮತ್ತು ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ (ಸ್ವಿಜರ್ಲೆಂಡ್‌) ಜೊತೆ ಡ್ರಾ ಮಾಡಿಕೊಂಡರು. ಕಣದಲ್ಲಿರುವ ಭಾರತದ ಆರನೇ ಆಟಗಾರ್ತಿ ತಾನಿಯಾ ಸಚ್‌ದೇವ್, ಪೋಲೆಂಡ್‌ನ ಒಲಿವಿಯಾ ಕಿಯೊಲ್ಬಸಾ ಮೇಲೆ ಜಯಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.