ಶೂಟಿಂಗ್ ಚಾಂಪಿಯನ್‌ಷಿಪ್‌: ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಯ್ಕೆಯಾದ ಶ್ರಿಯಾಂಕಾ ನವದೆಹಲಿ: ಶ್ರಿಯಾಂಕಾ ಸದಂಗಿ, ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಸ್ಥಾನ ಪಡೆದ ಭಾರತದ 13ನೇ ಶೂಟರ್ ಎನಿಸಿದರು. ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಅವರು ಮಹಿಳೆಯರ 50 ಮೀ. ರೈಫಲ್ 3 ಪೊಷಿಷನ್ (3P) ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿ ಅರ್ಹತೆ ಪಡೆದರು. ನಿಂತು, ಮಂಡಿಯೂರಿ ಮತ್ತು ಬೋರಲು ಸ್ಥಿತಿಯಲ್ಲಿ ಗುರಿಯಿಡುವ ಈ ಸ್ಪರ್ಧೆಯಲ್ಲಿ ಅವರು 440.5 ಪಾಯಿಂಟ್ಸ್ ಸಂಗ್ರಹಿಸಿದರು. ಕೊರಿಯಾದ ಅನುಭವಿ ಸ್ಪರ್ಧಿ ಲೀ ಯುನ್ಸೆಯೊ ಚಿನ್ನ ಗೆದ್ದುಕೊಂಡರು. ಹಾಲಿ ಏರ್‌ ರೈಫಲ್ ವಿಶ್ವ ಚಾಂಪಿಯನ್ ಹಾನ್‌ ಜಿಯಾಯು (ಚೀನಾ) ಬೆಳ್ಳಿ ಗೆದ್ದುಕೊಂಡೆರೆ, ಅದೇ ದೇಶದ ಷಿಯಾ ಸಿಯು ಕಂಚಿನ ಪದಕ ಕೊರಳಿಗೇರಿಸಿಕೊಂಡರು. ಫೈನಲ್‌ನಲ್ಲಿ ಶ್ರಿಯಾಂಕಾ ಉತ್ತಮ ಪ್ರದರ್ಶನ ನೀಡಿದರು. ಮೊದಲ ಹತ್ತು ಗುರಿ ಪ್ರಯತ್ನಗಳ ನಂತರ ಹಾನ್‌ ಮತ್ತು ಲೀ ಮೊದಲ ಎರಡು ಸ್ಥಾನ ಪೆದರೆ, ಶ್ರಿಯಾಂಕಾ ಅವರು ಭಾರತದ ಆಯುಷಿ ಪೊದ್ದಾರ್ ಅವರನ್ನು ಹಿಂದೆ ಹಾಕಿ ನಾಲ್ಕನೇ ಸ್ಥಾನಕ್ಕೇರಿದರು. ಅದನ್ನು ಕೊನೆಯವರೆಗೂ ಉಳಿಸಿಕೊಂಡರು. ಆಯುಷಿ ಕೊನೆಗೆ ಏಳನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.