ಫಿಡೆ ಗ್ರ್ಯಾಂಡ್‌ ಸ್ವಿಸ್‌ ಚೆಸ್‌: ಮುನ್ನಡೆ ಹಂಚಿಕೊಂಡ ವಿದಿತ್‌ ಐಲ್‌ ಆಫ್‌ ಮ್ಯಾನ್‌ (ಯುಕೆ): ಅಮೆರಿಕದ ಆಟಗಾರ ಹಾನ್ಸ್ ನೀಮನ್ ಅವರ ರಕ್ಷಣಾಕೋಟೆ ಧ್ವಂಸಗೊಳಿಸಿದ ಭಾರತದ ವಿದಿತ್‌ ಗುಜರಾತಿ ಫಿಡೆ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಯ ಆರನೇ ಸುತ್ತಿನ ನಂತರ ಇತರ ಏಳು ಆಟಗಾರರ ಜೊತೆ ಮುನ್ನಡೆ ಹಂಚಿಕೊಂಡಿದ್ದಾರೆ. ಈ ಎಂಟು ಮಂದಿ ಆಟಗಾರರು ತಲಾ ನಾಲ್ಕೂವರೆ ಅಂಕ ಸಂಗ್ರಹಿಸಿದ್ದು, ಇವರಲ್ಲಿ ಭಾರತದ ಇನ್ನೊಬ್ಬ ಗ್ರ್ಯಾಂಡ್‌ಮಾಸ್ವರ್ ಅರ್ಜುನ್ ಇರಿಗೇಶಿ ಅವರೂ ಇದ್ದಾರೆ. ಮೊದಲ ಸುತ್ತಿನಲ್ಲೇ ಸೋತಿದ್ದ ವಿದಿತ್‌ಗೆ ಇದು ನಂತರದ ಐದು ಸುತ್ತುಗಳಲ್ಲಿ ನಾಲ್ಕನೇ ಜಯ. ಕೌಶಲಪೂರ್ಣ ಆಟವಾಡಿದ ನಾಸಿಕ್‌ನ ಆಟಗಾರ ಆರನೇ ಬೋರ್ಡ್‌ನಲ್ಲಿ 53 ನಡೆಗಳಲ್ಲಿ ನೀಮನ್ ಮೇಲೆ ಜಯಗಳಿಸಿದರು. ಎರಡನೇ ಬೋರ್ಡ್‌ನಲ್ಲಿ ಆಡಿದ ಅರ್ಜುನ್‌, ಚೀನಾದ ಯು ಯಾಂಗ್ವಿ ಜೊತೆ ‘ಡ್ರಾ’ ಒಪ್ಪಂದಕ್ಕೆ ಸಹಿ ಮಾಡಿದರು. ವಿದಿತ್‌, ಅರ್ಜುನ್‌ ಜೊತೆಗೆ ಅಮೆರಿಕದ ಫ್ಯಾಬಿಯಾನೊ ಕರುವಾನ, ನಕಾರು ಹಿಕಾಮುರಾ, ರಷ್ಯಾದ ಆ್ಯಂಡ್ರಿ ಇಸಿಪೆಂಕೊ, ಸರ್ಬಿಯಾದ ಅಲೆಕ್ಸಾಂಡರ್‌ ಪ್ರೆಡ್ಕೆ, ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೋವ್ ಮತ್ತು ಪೋಲೆಂಡ್‌ನ ರೆಡೊಸ್ಲಾವ್ ವೊಜ್ತಾಝೆಕ್ ಅವರೂ 4.5 ಪಾಯಿಂಟ್ಸ್‌ ಕಲೆಹಾಕಿದ್ದಾರೆ. ಅರವಿಂದ್ ಚಿದಂಬರಮ್, ಎಸ್‌.ಎಲ್‌.ನಾರಾಯಣನ್ ಮತ್ತು ನಿಹಾಲ್ ಸರಿನ್ ಅವರು ತಲಾ ಮೂರುವರೆ ಅಂಕ ಸಂಗ್ರಹಿಸಿದ್ದಾರೆ. ಆರನೇ ಸುತ್ತಿನಲ್ಲಿ ಚಿದಂಬರಮ್, ತಮಗಿಂತ ಮೇಲಿನ ರ‍್ಯಾಂಕಿನ ನೊಡಿರ್ಬೆಕ್ ಅಬ್ದುಸತ್ತಾರೊವ್ ಅವರ ಜೊತೆ ಡ್ರಾ ಮಾಡಿಕೊಂಡರೆ, ಕೇರಳದ ಆಟಗಾರರಾದ ನಿಹಾಲ್ ಮತ್ತು ನಾರಾಯಣನ್ ‘ಡ್ರಾ’ ಒಪ್ಪಂದಕ್ಕೆ ಬಂದರು. ಪ್ರಗ್ಗು ಹಿನ್ನಡೆ: ಕಳೆದ ಕೆಲವು ತಿಂಗಳಿಂದ ಉತ್ತಮ ಪ್ರದರ್ಶನ ನೀಡಿದ್ದ ಪ್ರಜ್ಞಾನಂದ ಇಲ್ಲಿ ಒಂದೂ ಜಯ ಸಾಧಿಸಲು ಆಗಿಲ್ಲ. ಅವರೂ ಆಡಿದ ಆರೂ ಪಂದ್ಯಗಳು ‘ಡ್ರಾ’ ಆಗಿದ್ದು ಮೂರು ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಆರನೇ ಸುತ್ತಿನಲ್ಲಿ ಅವರು ಶಾಂತ್ ಸರ್ಗಾಸಿಯಾನ್ (ಅರ್ಮೇನಿಯಾ) ಜೊತೆ ಪಾಯಿಂಟ್‌ ಹಂಚಿಕೊಳ್ಳಲು ನಿರ್ಧರಿಸಿದರು. ಪಿ.ಹರಿಕೃಷ್ಣ (3), ಸ್ವದೇಶದ ಅರ್ಯನ್ ಚೋಪ್ರಾ (3) ಜೊತೆ ಡ್ರಾ ಮಾಡಿಕೊಂಡರು. ಆದರೆ ಭಾರತದ ಅಗ್ರಮಾನ್ಯ ಆಟಗಾರ ಗುಕೇಶ್ (2) ಅವರ ನಿರಾಶಾದಾಯಕ ಪ್ರದರ್ಶನ ಮುಂದುವರಿಯಿತು. ಅವರು ತಮಗಿಂತ ಕೆಳಕ್ರಮಾಂಕದ ಅಯ್ಡಿನ್ ಸುಲೆಮಾನ್ಲಿ (ಅಜರ್‌ಬೈಜಾನ್‌) ಅವರೆದುರು ಸೋಲೊಪ್ಪಬೇಕಾಯಿತು. ಎರಡನೇ ಸ್ಥಾನದಲ್ಲಿ ವೈಶಾಲಿ: ಮಹಿಳಾ ವಿಭಾಗದಲ್ಲಿ ಆರ್‌.ವೈಶಾಲಿ ಯಶಸ್ಸಿನ ಓಟ ಮುಂದುವರಿಸಿದ್ದು, ಎರಡನೇ ಬೋರ್ಡ್‌ನಲ್ಲಿ ಅಗ್ರ ಶ್ರೇಯಾಂಕದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನ್ಸ್‌ (ರಷ್ಯಾ) ಜೊತೆ ‘ಡ್ರಾ’ ಮಾಡಿಕೊಂಡರು. ವೈಶಾಲಿ ನಾಲ್ಕೂವರೆ ಅಂಕ ಸಂಗ್ರಹಿಸಿ ಎರಡನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಉಕ್ರೇನ್‌ನ ಅನ್ನಾ ಮುಝಿಚುಕ್ (5) ಆರನೇ ಸುತ್ತಿನಲ್ಲಿ ನಿನ್ನೆಯವರೆಗೆ ಮುನ್ನಡೆಯಲ್ಲಿದ್ದ ಬಿಬಿಸಾರಾ ಅಸ್ಸಾಬುಯೇವಾ (ಕಜಕಸ್ತಾನ, 4.5) ಅವರನ್ನು ಸೋಲಿಸಿ ಅಗ್ರಸ್ಥಾನಕ್ಕೇರಿದರು. ಭಾರತದ ಆಟಗಾರ್ತಿಯರಿದ್ದ ಇನ್ನೊಂದು ಪಂದ್ಯದಲ್ಲಿ ಡಿ.ಹಾರಿಕಾ (3.5) ಅವರು ಸ್ವದೇಶದ ಬಿ.ಸವಿತಾ ಶ್ರೀ (2.5) ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.