ಬ್ಯಾಡ್ಮಿಂಟನ್‌: ಫೈನಲ್‌ಗೆ ತನ್ವಿ, ಆಕಾಶ್ ನವದೆಹಲಿ: ಭಾರತದ ತನ್ವಿ ಶರ್ಮಾ ಮತ್ತು ಬೋರ್ನಿಲ್ ಆಕಾಶ್ ಚಂಗ್ಮಾಯಿ ಅವರು ಚೀನಾದ ಚೆಂಗ್ಡುವಿನಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ 17 ಮತ್ತು 15 ವರ್ಷದೊಳಗಿನವರ ಟೂರ್ನಿಯ ಸಿಂಗಲ್ಸ್‌ ಫೈನಲ್‌ ಪ್ರವೇಶಿಸಿದರು. ಬಾಲಕಿಯರ 17 ವರ್ಷದೊಳಗಿನವರ ವಿಭಾಗದ ಸೆಮಿಫೈನಲ್‌ನಲ್ಲಿ ತನ್ವಿ 21-19, 16-21, 21-11 ರಿಂದ ಎರಡನೇ ಶ್ರೇಯಾಂಕದ ಆಟಗಾರ್ತಿ ಥಾಯ್ಲೆಂಡ್‌ನ ಅನ್ಯಾಪತ್ ಫಿಚಿತ್‌ಪ್ರೀಚಸಕ್‌ ಅವರನ್ನು ಮಣಿಸಿದರು. ಬಾಲಕರ 15 ವರ್ಷದೊಳಗಿನವರ ವಿಭಾಗದ ನಾಲ್ಕರಘಟ್ಟದ ಹಣಾಹಣಿಯಲ್ಲಿ ಆಕಾಶ್ 21–16, 21–12 ರಿಂದ ಭಾರತದವರೇ ಆದ ಜಗಶೇರ್‌ ಸಿಂಗ್ ಖನ್ಗುರಾ ವಿರುದ್ಧ ಗೆದ್ದರು. ಸೋಲು ಅನುಭವಿಸಿದ ಜಗಶೇರ್ ಕಂಚು ಪಡೆದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ತನ್ವಿ ಅವರು ಥಾಯ್ಲೆಂಡ್‌ನ ಯಾತವೀಮಿನ್ ಕೆತ್ಕಿಲಿಯೆಂಗ್‌ ವಿರುದ್ಧ ಹಣಾಹಣಿ ನಡೆಸಲಿದ್ದರೆ, ಆಕಾಶ್‌ ಅವರು ಚೀನಾದ ಫಾನ್‌ ಹಾಂಗ್‌ ಕ್ಸುವಾನ್ ಅವರನ್ನು ಎದುರಿಸುವರು. ಬ್ಯಾಡ್ಮಿಂಟನ್ ಏಷ್ಯಾ ಟೂರ್ನಿಯ ಬಾಲಕಿಯರ 17 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ಸುತ್ತು ತಲುಪಿದ ಭಾರತದ ಎರಡನೇ ಆಟಗಾರ್ತಿ ಎಂಬ ಗೌರವಕ್ಕೆ ತನ್ವಿ ಪಾತ್ರರಾದರು. ಕಳೆದ ವರ್ಷ ಉನ್ನತಿ ಹೂಡಾ ಫೈನಲ್‌ ಪ್ರವೇಶಿಸಿದ್ದರಲ್ಲದೆ, ಬೆಳ್ಳಿ ತಮ್ಮದಾಗಿಸಿಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.