ಡೆನ್ಮಾರ್ಕ್‌ ಓಪನ್‌ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೆ ಸಿಂಧು ಒಡೆನ್ಸ್, ಡೆನ್ಮಾರ್ಕ್‌: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಡೆನ್ಮಾರ್ಕ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದಾರೆ. ಆದರೆ, ಮತ್ತೊಬ್ಬ ಆಟಗಾರ್ತಿ ಆಕರ್ಷಿ ಕಶ್ಯಪ್‌ ನಿರಾಸೆ ಅನುಭವಿಸಿದರು. ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ವಿಶ್ವದ 12ನೇ ಕ್ರಮಾಂಕದ ಸಿಂಧು ಅವರು 7ನೇ ಕ್ರಮಾಂಕದ ಇಂಡೊನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ಅವರನ್ನು ಸದೆಬಡಿದರು. 71 ನಿಮಿಷ ನಡೆದ ಮ್ಯಾರಥಾನ್‌ನಲ್ಲಿ 18-21, 21-15, 21-13 ರಿಂದ ಮಣಿಸಿದರು. ಉತ್ತಮ ಪೈಪೋಟಿಯ ಹೊರತಾಗಿಯೂ ಮೊದಲ ಗೇಮ್‌ ಕಳೆದುಕೊಂಡ ಸಿಂಧು, ಎರಡನೇ ಗೇಮ್‌ನಲ್ಲಿ ಪುಟಿದೆದ್ದರು. ನಿಖರವಾದ ಆಟದೊಂದಿಗೆ 13–4ರ ಮುನ್ನಡೆ ಪಡೆದ ಅವರು ಗೇಮ್‌ ಅನ್ನು ಸಮಬಲಗೊಳಿಸಿದರು. ನಿರ್ಣಾಯಕ ಗೇಮ್‌ನ ಆರಂಭದಲ್ಲಿ ಕೆಲ ತಪ್ಪುಗಳಿಂದ 5–9ರ ಹಿನ್ನಡೆ ಕಂಡರೂ ಛಲ ಬಿಡಲಿಲ್ಲ. ಇಂಡೊನೇಷ್ಯಾದ ಆಟಗಾರ್ತಿ ಬ್ಯಾಕ್‌ಲೈನ್‌ ಮತ್ತು ನೆಟ್‌ನಲ್ಲಿ ಮಾಡಿದ ಕೆಲ ತಪ್ಪುಗಳ ಲಾಭ ಪಡೆದ ಸಿಂಧು, ರಿವರ್ಸ್‌ ಡ್ರಾಪ್‌ಗಳ ಮೂಲಕ 7 ಪಾಯಿಂಟ್‌ ಗಳಿಸಿ ಗೆಲುವು ಸಾಧಿಸಿದರು. ಕಳೆದ ವಾರ ಆರ್ಕಟಿಕ್ ಓಪನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದ ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಮತ್ತೆ ಲಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಿಂಧು ಅವರು ಗ್ರೆಗೋರಿಯಾ ವಿರುದ್ಧ 8–2 ಗೆಲುವಿನ ದಾಖಲೆ ಹೊಂದಿದ್ದಾರೆ. ಆದರೆ, ಕೊನೆಯ ಮೂರು ಮುಖಾಮುಖಿಯಲ್ಲಿ ಎರಡು ಬಾರಿ ಸೋತಿದ್ದರು. ಮತ್ತೊಂದು ಪಂದ್ಯದಲ್ಲಿ 38ನೇ ಕ್ರಮಾಂಕದ ಆಕರ್ಷಿ ಕಶ್ಯಪ್‌ ಅವರು 21–18, 21–8 ರಿಂದ 19ನೇ ಕ್ರಮಾಂಕದ ಥಾಯ್ಲೆಂಡ್‌ನ ಸುಪಾನಿಡಾ ಕಟೆಥಾಂಗ್ ಅವರಿಗೆ ಮಣಿದರು. ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸಿಂಧು ಅವರು ಸುಪಾನಿಡಾ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್‌ ಫೈನಲ್‌ ಪಂದ್ಯ ಪಿ.ವಿ.ಸಿಂಧು– ಸುಪಾನಿಡಾ ಕಟೆಥಾಂಗ್ ಸಮಯ: ಮಧ್ಯಾಹ್ನ 3.30 ನೇರಪ್ರಸಾರ: ಜಿಯೊ ಸಿನಿಮಾ, ಸ್ಪೋರ್ಟ್ಸ್‌ 18 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.