ಅಥ್ಲೆಟಿಕ್ಸ್‌: ಪಾವನಾಗೆ ಲಾಂಗ್‌ಜಂಪ್‌ ಚಿನ್ನ ಮೈಸೂರು: ಬೆಂಗಳೂರಿನ ಪಾವನಾ ನಾಗರಾಜು ಇಲ್ಲಿ ನಡೆಯುತ್ತಿರುವ ಸಿ.ಎಂ. ಕಪ್‌ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಲಾಂಗ್‌ಜಂಪ್‌ನಲ್ಲಿ ಚಿನ್ನ ಹಾಗೂ ಹೈಜಂಪ್‌ನಲ್ಲಿ ಬೆಳ್ಳಿ ಪಡೆದು ಸಂಭ್ರಮಿಸಿದರು. ಚಾಮುಂಡಿವಿಹಾರ ಕ್ರೀಡಾಂಗಣದ ಸಿಂಥೆಟಿಕ್‌ ಅಂಗಳದಲ್ಲಿ ಗುರುವಾರ ನಡೆದ ಮಹಿಳೆಯರ ಹೈಜಂಪ್‌ನಲ್ಲಿ ಪಾವನಾ ಹಾಗೂ ಯಾದಗಿರಿಯ ಪಲ್ಲವಿ ಪಾಟೀಲ ನಡುವೆ ತೀವ್ರ ಸ್ಪರ್ಧೆ ಕಂಡುಬಂತು. ಇಬ್ಬರೂ 1.67 ಮೀಟರ್ ಎತ್ತರ ಜಿಗಿದು ಸಮಬಲ ಸಾಧಿಸಿದರು. ಪಲ್ಲವಿ ಅವರು ಪಾವನಾಗಿಂತ ಕಡಿಮೆ ಅವಕಾಶದಲ್ಲಿ ಈ ಸಾಧನೆ ತೋರಿದ್ದರಿಂದ ಅವರಿಗೆ ಚಿನ್ನ ಒಲಿಯಿತು. ಪಾವನಾಗೆ ಬೆಳ್ಳಿ ಲಭಿಸಿತು. ಲಾಂಗ್‌ಜಂಪ್‌ನಲ್ಲಿಯೂ ಪ್ರತಿಭೆ ಪ್ರದರ್ಶನಕ್ಕಿಟ್ಟ ಪಾವನಾ ಕಡೆಯ ಅವಕಾಶದಲ್ಲಿ 6.10 ಮೀಟರ್ಸ್ ಜಿಗಿದು ಬಂಗಾರದ ಪದಕ ಪಡೆದು ಸಂಭ್ರಮಿಸಿದರು. ಅವರಿಗೆ ಪೈಪೋಟಿ ಒಡ್ಡಿದ ವಿ.ಎಸ್. ಶ್ರೀದೇವಿಕಾ 5.94 ಮೀ. ಸಾಧನೆಯೊಂದಿಗೆ ಬೆಳ್ಳಿ ಪಡೆದರು. 800 ಮೀಟರ್ಸ್ ಓಟದಲ್ಲಿ ಬೆಂಗಳೂರು ಕ್ರೀಡಾ ಹಾಸ್ಟೆಲ್‌ನ ಕೆ. ಸೂರ್ಯ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಜಿ.ಕೆ. ವಿಜಯಕುಮಾರಿ ಅವರು ಚಿನ್ನ ಗೆದ್ದರು. ಓಟದ ಕಡೆಯ ಕೆಲವು ಸೆಕೆಂಡುಗಳಲ್ಲಿ ವೇಗ ಹೆಚ್ಚಿಸಿಕೊಂಡ ಸೂರ್ಯ 2ನಿ. 07.47 ಸೆಕೆಂಡುಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು. ಅವರಿಗೆ ತೀವ್ರ ಪೈಪೋಟಿ ಒಡ್ಡಿದ ಮೈಸೂರಿನ ರಾಹುಲ್ ಚೌಧರಿ 2ನಿ. 07.94 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಮಹಿಳೆಯರ ವಿಭಾಗದಲ್ಲಿ ವಿಜಯಕುಮಾರಿ 2ನಿ, 10.47 ಸೆಕೆಂಡುಗಳಲ್ಲಿ ಓಟ ಪೂರೈಸಿದರು. ಪುರುಷರ 5000 ಮೀಟರ್ಸ್ ಓಟದಲ್ಲಿಯೂ ಇಬ್ಬರ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಬೆಂಗಳೂರಿನ ಡಿವೈಇಎಸ್‌ನ ವೈಭವಮೂರ್ತಿ ಪಾಟೀಲ 15 ನಿ. 17.24 ಸೆಕೆಂಡುಗಳಲ್ಲಿ ಓಟ ಪೂರೈಸಿ ಬಂಗಾರ ಗೆದ್ದರೆ, ಬೆಂಗಳೂರಿನ ಎ.ಆರ್. ರೋಹಿತ್ 15ನಿ. 17.70 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ತಮ್ಮದಾಗಿಸಿಕೊಂಡರು. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಚೈತ್ರಾ ದೇವಾಡಿಗ 18ನಿ. 24.44 ಸೆಕೆಂಡುಗಳೊಂದಿಗೆ ಅಗ್ರಸ್ಥಾನ ಪಡೆದರು. ಕೊಕ್ಕೊ: ಮಹಿಳೆಯರ ವಿಭಾಗದ ಕೊಕ್ಕೊ ಫೈನಲ್‌ನಲ್ಲಿ ಯಾದಗಿರಿ ತಂಡ, ಬೆಳಗಾವಿ ತಂಡವನ್ನು 7–6 ಅಂಕಗಳಿಂದ ಮಣಿಸಿ ಪ್ರಶಸ್ತಿ ಜಯಿಸಿತು. ವಿಜೇತ ತಂಡದ ಪರ ಪೂಜಾ ಉತ್ತಮ ಪ್ರದರ್ಶನ ತೋರಿದರು. ಪುರುಷರ ವಿಭಾಗದ ಫೈನಲ್‌ನಲ್ಲಿ ಬಾಗಲಕೋಟೆ ತಂಡವು ಬೆಳಗಾವಿ ತಂಡವನ್ನು 19–15 ಅಂಕಗಳಿಂದ ಮಣಿಸಿತು. ಕಬಡ್ಡಿ: ಕಬಡ್ಡಿಯ ಎರಡೂ ವಿಭಾಗದಲ್ಲಿಯೂ ದಕ್ಷಿಣ ಕನ್ನಡ ತಂಡಗಳು ಬಂಗಾರ ಗೆದ್ದವು. ಪುರುಷರ ವಿಭಾಗದಲ್ಲಿ ಹಾಸನ ಹಾಗೂ ಮಹಿಳೆಯರ ವಿಭಾಗದಲ್ಲಿ ರಾಮನಗರ ಬೆಳ್ಳಿ ಗೆದ್ದವು. ಅಥ್ಲೆಟಿಕ್ಸ್‌ ಫಲಿತಾಂಶ: ಪುರುಷರು: 800 ಮೀಟರ್ಸ್ ಓಟ: ಕೆ. ಸೂರ್ಯ (ಡಿವೈಇಎಸ್‌, ಬೆಂಗಳೂರು)–1, ರಾಹುಲ್‌ ಚೌಧರಿ (ಮೈಸೂರು)–2, ಎಸ್. ಕಮಲನಾಥನ್‌ (ಬಿಯುಡಿಎಎ)–3. ಕಾಲ: 2ನಿ, 07.47 ಸೆ. ಶಾಟ್‌ಪಟ್‌: ಎಸ್‌.ಆರ್. ರಾಹುಲ್‌ ಕಶ್ಯಪ್‌ (ಮೈಸೂರು)–1, ಪ್ರಜ್ವಲ್‌ ಶೆಟ್ಟಿ (ಉಡುಪಿ)–2, ಮಾನುಷ್‌ (ಮೈಸೂರು)–3. ದೂರ: 16.45 ಮೀ. 5000 ಮೀಟರ್ಸ್‌ ಓಟ: ವೈಭವಮೂರ್ತಿ ಪಾಟೀಲ್‌ (ಡಿವೈಇಎಸ್‌, ಬೆಂಗಳೂರು)–1, ಎ.ಆರ್. ರೋಹಿತ್‌ (ಬೆಂಗಳೂರು)–2, ಗುರುಪ್ರಸಾದ್ (ಕೆಎಸ್‌ಪಿ)–3. ಕಾಲ: 15 ನಿ, 17.24 ಸೆ. ಮಹಿಳೆಯರ ವಿಭಾಗ: 800 ಮೀ. ಓಟ: ಜಿ.ಕೆ. ವಿಜಯಕುಮಾರಿ (ಸಾಯ್‌, ಬೆಂಗಳೂರು)–1, ಇ.ಬಿ. ಅರ್ಪಿತಾ (ಫ್ಯೂಷನ್ ಕ್ಲಬ್‌, ಬೆಂಗಳೂರು)–2, ದೀಪಶ್ರೀ (ಆಳ್ವಾಸ್‌, ಮೂಡಬಿದಿರೆ)–3. ಕಾಲ: 2ನಿ, 10.46ಸೆ. 5000 ಮೀ. ಓಟ: ಚೈತ್ರಾ ದೇವಾಡಿಗ ( ಆಳ್ವಾಸ್‌)–1, ಎನ್‌.ಎಲ್. ತೇಜಸ್ವಿನಿ (ಕೆಎಸ್‌ಪಿ)–2, ಶಾಹಿನ್‌ ಶಂಶುದ್ದೀನ್‌ (ಧಾರವಾಡ)–3. ಕಾಲ: 18ನಿ. 24.44 ಸೆ. ಹೈಜಂಪ್‌: ಪಲ್ಲವಿ ಪಾಟೀಲ (ಯಾದಗಿರಿ)–1, ಎನ್. ಪಾವನಾ (ಬೆಂಗಳೂರು)–2, ಫ್ಲರ್ವೀಶಾ ಮೊಂಟೆರೊ (ದಕ್ಷಿಣ ಕನ್ನಡ)–3. ಎತ್ತರ: 1.67 ಮೀ. ಲಾಂಗ್‌ ಜಂಪ್: ಪಾವನಾ ನಾಗರಾಜು (ಬೆಂಗಳೂರು)–1, ವಿ.ಎಸ್. ಶ್ರೀದೇವಿಕಾ–2, ಅಕ್ಷತಾ–3: ದೂರ: 6.10 ಮೀ. ಜಾವೆಲಿನ್‌ ಥ್ರೋ: ಕರಿಷ್ಮಾ ಸಾಹಿಲ್–1, ಶ್ರಾವ್ಯ (ಉಡುಪಿ)–2, ನಿಧಿ ಶೆಟ್ಟಿ (ಉಡುಪಿ)–3. ದೂರ: 52.06 ಮೀ. ಸೈಕ್ಲಿಂಗ್‌ (ಪುರುಷರು): 50 ಕಿ.ಮೀ. ಟೀಮ್ ಟೈಮ್‌ ಟ್ರಯಲ್‌: ವಿಜಯಪುರ–1, ಬಾಗಲಕೋಟೆ–2, ಮೈಸೂರು–3. ಮಹಿಳೆಯರು: 50 ಕಿ.ಮೀ. ಟೀಮ್ ಟೈಮ್‌ ಟ್ರಯಲ್‌: ವಿಜಯಪುರ–1, ಬಾಗಲಕೋಟೆ–2, ಗದಗ–3. ಲಾನ್‌ ಟೆನಿಸ್‌ (ಪುರುಷರು): ಸಿಂಗಲ್ಸ್‌: ಎಸ್‌.ಎಸ್. ಮಂಜುನಾಥ ಪ್ರಸಾದ್‌ (ಮೈಸೂರು)–1, ಎಸ್‌. ಶಾಂತಕುಮಾರ್ (ಬೆಂಗಳೂರು)–2, ಎಂ. ಶ್ರೇಯಾಂತ್‌–3; ಡಬಲ್ಸ್‌: ಯೋಗಿನ್‌ ಪ್ರಕಾಶ್‌, ಎಚ್‌.ಎನ್. ಧನುಶ್‌ (ಮೈಸೂರು)–1, ದೇವ್‌ ಸಿನ್ಹಾ, ಕೆ.ಕೆ. ತರುಣ್‌ ಗಣಪತಿ (ಬೆಂಗಳೂರು)–2 ಮಹಿಳೆಯರು: ಸಿಂಗಲ್ಸ್‌: ಎಂ. ಸುಹಿತಾ (ಬೆಂಗಳೂರು)–1, ಹರ್ಷಿಣಿ ನಾಗರಾಜು (ವರ್ತೂರು)–2, ಕಾಶ್ವಿ ಸುನಿಲ್ (ಮಂಡ್ಯ)–3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.