ಮಂಗಳೂರು | ಫಿಡೆ ರೇಟೆಡ್ ಚೆಸ್ ಟೂರ್ನಿ: ಇಂದ್ರಜೀತ್‌, ಅನಿಲ್ ಕುಮಾರ್ ಮುನ್ನಡೆ ಮಂಗಳೂರು: ಮಹಾರಾಷ್ಟ್ರ ಮತ್ತು ತಮಿಳುನಾಡು ಆಟಗಾರರು ಪಾರಮ್ಯ ಮೆರೆದ ಫಿಡೆ ರೇಟೆಡ್ ಅಖಿಲ ಭಾರತ ಚೆಸ್ ಟೂರ್ನಿಯ ಮೂರನೇ ದಿನ ಇಂದ್ರಜೀತ್ ಮಹೀಂದ್ರಕರ್‌ ಮತ್ತು ನಿಗಶ್‌ ಜಿ ಸೇರಿದಂತೆ ಐವರು ಮುನ್ನಡೆ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ ನಗರದ ಪುರಭವನದಲ್ಲಿ ಆಯೋಜಿಸಿರುವ ಟೂರ್ನಿಯ ಎರಡನೇ ದಿನ ಉತ್ತಮ ಸಾಮರ್ಥ್ಯ ಪ್ರದರ್ಶಿಸಿದ್ದ ಕರ್ನಾಟಕದ ಆಟಗಾರರು ಗುರುವಾರ ನಿರಾಸೆ ಅನುಭವಿಸಿದರು. ಅಗ್ರ ಶ್ರೇಯಾಂಕದ, ದಕ್ಷಿಣ ಕನ್ನಡ ಜಿಲ್ಲೆಯ ಆಟಗಾರ ಗಹನ್ ಎಂ.ಜಿ ಐದು ಸುತ್ತುಗಳ ಮುಕ್ತಾಯಕ್ಕೆ 4 ಪಾಯಿಂಟ್‌ಗಳೊಂದಿಗೆ ಹಿನ್ನಡೆ ಅನುಭವಿಸಿದರು. ಮಹಾರಾಷ್ಟ್ರದ ಇಂದ್ರಜೀತ್ ಮಹೀಂದ್ರಕರ್‌, ಆದಿತ್ಯ ಸಾವಳ್ಕರ್, ತಮಿಳುನಾಡಿನ ನಿಗಶ್ ಜಿ, ಕೃಪೇಶ್ ಐ ಮತ್ತು ಕೇರಳದ ಅನಿಲ್ ಕುಮಾರ್ ಒ.ಟಿ 5 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಆಗಸ್ಟಿನ್ ಎ ಮತ್ತು ಮೇಧಾಂಶ್ ರಾಠಿ 4.5 ಪಾಯಿಂಟ್‌ಗಳೊಂದಿಗೆ ಭರವಸೆ ಮೂಡಿಸಿದರೆ, ಅನ್ಶುಲ್ ಪಣಿಕ್ಕರ್‌, ಸುಶಾಂತ್ ವಾಮನ್ ಶೆಟ್ಟಿ, ಸಿದ್ಧಾಂತ್ ಪೂಂಜಾ ಮತ್ತು ಧ್ರುವ ಚಿಪ್ಲಿ ಅವರಿಗೆ 4 ಪಾಯಿಂಟ್‌ ಮಾತ್ರ ಗಳಿಸಲು ಸಾಧ್ಯವಾಯಿತು. 1990 ಯೆಲೊ ರೇಟಿಂಗ್ ಹೊಂದಿರುವ ಮಹಾರಾಷ್ಟ್ರದ ಇಂದ್ರಜೀತ್ ಮಹೀಂದ್ರಕರ್ 5ನೇ ಸುತ್ತಿನಲ್ಲಿ ಅಫ್ರೀದ್ ಖಾನ್‌ (1634) ವಿರುದ್ಧ ಜಯ ಸಾಧಿಸಿದರು. ತಮಿಳುನಾಡಿನ ನಿಗಶ್ ಜಿ (1662) ತಮಗಿಂತ ಹೆಚ್ಚಿನ ರೇಟಿಂಗ್ ಹೊಂದಿರುವ ಕೇರಳದ ಶಾರ್ಶ ಬೇಕರ್ (1965) ವಿರುದ್ಧ ಜಯ ಸಾಧಿಸಿದರು. ಕೇರಳ ರಾಜ್ಯದ ಮಾಜಿ ಚಾಂಪಿಯನ್ ಅನಿಲ್ ಕುಮಾರ್ ಒ.ಟಿ (1875) ಎದುರು ಸುಶಾಂತ್ ವಾಮನ್ ಶೆಟ್ಟಿ ಸೋಲನುಭವಿಸಿದರು. ಕೃಪೇಶ್ ಮತ್ತು ಆದಿತ್ಯ ಸಾವಳ್ಕರ್ ಕ್ರಮವಾಗಿ ಕರ್ನಾಟಕದ ಸಿದ್ಧಾಂತ್ ಪೂಂಜಾ ವಿರುದ್ಧ ಮತ್ತು ಕೇರಳದ ರಜಿತ್ ವಿ ಎದುರು ಜಯ ಗಳಿಸಿದರು. 5ನೇ ಸುತ್ತಿನ ಫಲಿತಾಂಶಗಳು: ಮಹಾರಾಷ್ಟ್ರದ ಇಂದ್ರಜೀತ್ ಮಹೀಂದ್ರಕರ್‌ಗೆ ಆಂಧ್ರಪ್ರದೇಶದ ಅಫ್ರೀದ್ ಖಾನ್ ವಿರುದ್ಧ ಜಯ; ಕೇರಳದ ತಮಿಳುನಾಡಿನ ನಿಗಶ್ ಜಿ ಅವರಿಗೆ ಕೇರಳದ ಶಾರ್ಶಾ ಬೇಕರ್‌ ವಿರುದ್ಧ, ಕೇರಳದ ಅನಿಲ್ ಕುಮಾರ್ ಒ.ಟಿಗೆ ಕರ್ನಾಟಕದ ಸುಶಾಂತ್‌ ವಾಮನ್ ಶೆಟ್ಟಿ ವಿರುದ್ಧ, ತಮಿಳುನಾಡಿನ ಕೃಪೇಶ್‌ಗೆ ಕರ್ನಾಟಕದ ಸಿದ್ಧಾಂತ್ ಪೂಂಜಾ ವಿರುದ್ಧ, ಮಹಾರಾಷ್ಟ್ರದ ಆದಿತ್ಯ ಸಾವಳ್ಕರ್‌ಗೆ ಕೇರಳದ ರಜಿತ್ ವಿ ವಿರುದ್ಧ, ತಮಿಳುನಾಡಿನ ರಾಮನಾಥನ್ ಬಾಲಸುಬ್ರಹ್ಮಣ್ಯಂಗೆ ಕರ್ನಾಟಕದ ಅನ್ಶುಲ್ ಪಣಿಕ್ಕರ್ ವಿರುದ್ಧ ಜಯ; ತಮಿಳುನಾಡಿನ ರವೀಶ್‌ಗೆ ಕರ್ನಾಟಕದ ರವೀಶ್ ಕೋಟೆ ಎದುರು, ಕರ್ನಾಟಕದ ಆಗಸ್ಟಿನ್‌ಗೆ ತಮಿಳುನಾಡಿನ ಸ್ವರ್ಣಮಲಾ ಎದುರು, ತಮಿಳುನಾಡಿನ ಸುಬ್ರಹ್ಮಣ್ಯಗೆ ಕರ್ನಾಟಕದ ವೈದ್ಯನಾಥನ್ ಕಣ್ಣನ್ ಎದುರು, ಕರ್ನಾಟಕದ ಮೇಧಾಂಶ್ ರಾಠಿಗೆ ಕರ್ನಾಟಕದ ಅರವಿಂದ ಬಿ.ಆರ್ ಎದುರು, ತೆಲಂಗಾಣದ ನಾಗಸಾಯ್ ಸಾರ್ಥಕ್‌ಗೆ ಕರ್ನಾಟಕದ ಶ್ರೀಕಾಂತ್ ಎನ್‌ ವಿರುದ್ಧ, ತಮಿಳುನಾಡಿನ ಪ್ರಣವ್‌ ಗಣೇಶ್‌ಗೆ ತಮಿಳುನಾಡಿನ ಗಣೇಶನ್ ಕೆ ವಿರುದ್ಧ ಮತ್ತು ಕರ್ನಾಟಕದ ಗಹನ್ ಎಂ.ಜಿಗೆ ಕರ್ನಾಟಕದ ಆರುಷಿ ಸೆವೆರಿನ್ ಹೆಲೆನ್ ವಿರುದ್ಧ ಗೆಲುವು; ಕರ್ನಾಟಕದ ಧ್ರುವ ಚಿಪ್ಲಿ ಮತ್ತು ಕೇರಳದ ಜೋಯ್ ಲಾಝರ್‌, ತಮಿಳುನಾಡಿನ ಮುತ್ತುಕುಮಾರ್ ಮುಕೇಶ್ ಮತ್ತು ಕೇರಳದ ಅಹಜ್‌ ನಡುವಿನ ಪಂದ್ಯ ಡ್ರಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.