ಬ್ಯಾಡ್ಮಿಂಟನ್ ಏಷ್ಯಾ: ಭಾರತಕ್ಕೆ 3 ಪದಕ ಖಚಿತ ನವದೆಹಲಿ: ಭಾರತದ ಜಗಶೇರ್‌ ಸಿಂಗ್ ಖನ್ಗುರಾ, ಬೊರ್ನಿಲ್ ಆಕಾಶ್ ಚಂಗ್ಮಾಯಿ ಮತ್ತು ತನ್ವಿ ಶರ್ಮಾ ಅವರು ಚೀನಾದ ಚೆಂಗ್ಡುವಿನಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ 17 ಮತ್ತು 15 ವರ್ಷದಗೊಳಗಿನವರ ವಿಭಾಗದಲ್ಲಿ ಸೆಮಿಫೈನಲ್ ತಲುಪಿದರು. ಆ ಮೂಲಕ ಕೂಟದ ನಾಲ್ಕನೇ ದಿನವಾದ ಶುಕ್ರವಾರ ಮೂರು ಪದಕಗಳನ್ನು ಖಚಿತಪಡಿಸಿಕೊಂಡರು. 15 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ನಲ್ಲಿ ಜಗಶೇರ್ 21–14, 21–13 ರಿಂದ ಚೀನಾ ಮಾ ಚು ಷುವಾನ್ ಅವರನ್ನು ಕೇವಲ 28 ನಿಮಿಷಗಳಲ್ಲಿ ಸೋಲಿಸಿದರು. ಬೋರ್ನಿಲ್, ತೀವ್ರ ಹೋರಾಟದ ಪಂದ್ಯದಲ್ಲಿ ಕೊರಿಯಾದ ಪಾರ್ಕ್ ಜಂಗ್‌ ಬಿನ್ ಅವರನ್ನು ಹಿಮ್ಮೆಟ್ಟಿಸಿದರು. ಮೊದಲ ಸೆಟ್‌ ಹಿನ್ನಡೆಯಿಂದ ಚೇತರಿಸಿಕೊಂಡ ತನ್ವಿ ಶರ್ಮಾ 17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಚೀನಾ ತೈಪಿಯ ಲಿಯಾವೊ ಜುಯಹಿ ಚಿ ಅವರನ್ನು 20–22, 21–15, 21–15 ರಿಂದ ಸೋಲಿಸಿ ನಾಲ್ಕರ ಘಟ್ಟಕ್ಕೆ ಮುನ್ನಡೆದರು. 17 ವರ್ಷದೊಳಗಿನ ಬಾಲಕಿಯರ ಡಬಲ್ಸ್‌ನಲ್ಲಿ ತನ್ವಿ ಮತ್ತು ರೆಷಿಕಾ ಉತಾಯಸೂರಿಯನ್ 10–20, 20–22 ರಿಂದ ಚೀನಾದ ಫು ಷಿನ್ ಯಿ– ಕ್ವಿನ್‌ ಷಿ ಯಾಂಗ್ ಅವರಿಗೆ ಮಣಿದರು. ಶನಿವಾರ ನಡೆಯಲಿರುವ 15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಜಗಶೇರ್– ಬೋರ್ನಿಲ್ ಅವರು ಮುಖಾಮುಖಿ ಆಗಲಿದ್ದಾರೆ. ತನ್ವಿ 17 ವರ್ಷದೊಳಗಿನ ಸಿಂಗಲ್ಸ್‌ನಲ್ಲಿ ಎರಡನೇ ಶ್ರೇಯಾಂಕದ ಅನ್ಯಾಪತ್ ಫಿಚಿತ್‌ಪ್ರೀಚಸಕ್ (ಥಾಯ್ಲೆಂಡ್‌) ಅವರನ್ನು ಎದುರಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.