ಪ್ಯಾರಾ ಏಷ್ಯನ್‌ ಕ್ರೀಡಾಕೂಟ; ಭಾರತದ ಪದಕ ಬೇಟೆ ಹಾಂಗ್‌ಝೌ (ಪಿಟಿಐ): ಪ್ರಾಚಿ ಯಾದವ್ ಅವರು ಪ್ಯಾರಾ ಏಷ್ಯನ್‌ ಕ್ರೀಡಾಕೂಟದ ಕೆನೊಯಿಂಗ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾದರು. ಮಂಗಳವಾರ ನಡೆದ ಮಹಿಳೆಯರ ಕೆಎಲ್‌2 ವಿಭಾಗದಲ್ಲಿ ಅವರು ಅಗ್ರಸ್ಥಾನ ಪಡೆದರು. ಸೋಮವಾರ ನಡೆದಿದ್ದ ವಿಎಲ್‌2 ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ಎರಡು ದಿನಗಳ ಬಳಿ ಭಾರತ ತಂಡ ಒಟ್ಟು 34 ಪದಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. 9 ಚಿನ್ನ, 12 ಬೆಳ್ಳಿ ಮತ್ತು 13 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಭಾರತದ ಕ್ರೀಡಾಪಟುಗಳು ಸೋಮವಾರ ಮತ್ತು ಮಂಗಳವಾರ ತಲಾ 17 ಪದಕಗಳನ್ನು ಗೆದ್ದುಕೊಂಡರು. 165 ಪದಕಗಳನ್ನು ಜಯಿಸಿರುವ ಚೀನಾ, ಅಗ್ರಸ್ಥಾನದಲ್ಲಿದೆ. ಇರಾನ್‌ (47), ಜಪಾನ್‌ (45) ಮತ್ತು ಉಜ್ಬೆಕಿಸ್ತಾನ (38) ಬಳಿಕದ ಸ್ಥಾನಗಳಲ್ಲಿವೆ. ದೀಪ್ತಿ ಜೀವಾಂಜಿ (ಮಹಿಳೆಯರ 400ಮೀ. ಓಟ) ಮತ್ತು ನೀರಜ್‌ ಯಾದವ್‌ (ಪುರುಷರ ಡಿಸ್ಕಸ್‌ ಥ್ರೊ) ಅವರು ಮಂಗಳವಾರ ಚಿನ್ನ ಗೆದ್ದ ಭಾರತದ ಇತರ ಕ್ರೀಡಾಪಟುಗಳು. ಶರತ್‌ ಶಂಕರಪ್ಪ ಅವರು ಪುರುಷರ 5000 ಮೀ. ಓಟದಲ್ಲಿ ಅಗ್ರಸ್ಥಾನ ಪಡೆದರು. ಆದರೆ ಈ ವಿಭಾಗದಲ್ಲಿ ಇಬ್ಬರು ಸ್ಪರ್ಧಿಗಳು ಮಾತ್ರ ಕಣದಲ್ಲಿದ್ದ ಕಾರಣ ಸಂಘಟಕರು ಪದಕ ನೀಡಲಿಲ್ಲ. ಏಷ್ಯನ್‌ ಪ್ಯಾರಾಲಿಂಪಿಕ್ಸ್‌ ನಿಯಮಗಳ ಪ್ರಕಾರ ಮೂವರಿಗಿಂತ ಕಡಿಮೆ ಸ್ಪರ್ಧಿಗಳು ಇದ್ದರೆ, ಪದಕ ನೀಡುವ ನಿರ್ಧಾರವನ್ನು ತಾಂತ್ರಿಕ ಅಧಿಕಾರಿಗಳು ತೆಗೆದುಕೊಳ್ಳುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.