‘ದಿ ಲಾರ್ಡ್ಸ್ ಆಫ್ ವಾಂಖೆಡೆ‘: 1983ರ ಗೆಲುವು ಮಹತ್ವದ ತಿರುವು –ವೆಂಗ್‌ಸರ್ಕರ್ ಬೆಂಗಳೂರು: ‘1983ರ ಏಕದಿನ ವಿಶ್ವಕಪ್ ಟೂರ್ನಿಯ ಗೆಲುವು ಭಾರತದ ಕ್ರಿಕೆಟ್‌ಗೆ ಮಹತ್ವದ ತಿರುವು. ಪ್ರಶಸ್ತಿ ಗೆದ್ದ ನಂತರ ಈ ಕ್ರೀಡೆಯನ್ನು ಜನರು ನೋಡುವ ದೃಷ್ಟಿಕೋನವೇ ಬದಲಾಯಿತು’ ಎಂದು 1983ರ ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದ ದಿಲೀಪ್ ವೆಂಗ್‌ಸರ್ಕರ್ ಹೇಳಿದರು. ಬೆಂಗಳೂರಿನ ಸೆಂಚುರಿ ಕ್ಲಬ್‌ನಲ್ಲಿ ಮಂಗಳವಾರ ಮಾಜಿ ಕ್ರಿಕೆಟಿಗ ಡಬ್ಲ್ಯು.ವಿ. ರಾಮನ್ ಮತ್ತು ಕ್ರೀಡಾ ಪತ್ರಕರ್ತ ಆರ್. ಕೌಶಿಕ್ ಅವರ ‘ದಿ ಲಾರ್ಡ್ಸ್ ಆಫ್ ವಾಂಖೆಡೆ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆದ ಬಳಿಕ ಭಾರತ ಕ್ರಿಕೆಟ್‌ ತಂಡದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆಯೂ ಅಧಿಕವಾಯಿತು. ಅವರ ನಿರೀಕ್ಷೆಗಳಿಗೆ ತಕ್ಕಂತೆ ಆಡುವುದು ಸವಾಲಾಗಿತ್ತು’ ಎಂದರು. ‘ಕ್ರಿಕೆಟ್‌ನ ಒಳನೋಟ ಮತ್ತು ಅನನ್ಯ ದ್ವಂದ್ವ ದೃಷ್ಟಿಕೋನದ ಮೇಲೆ ಬೆಳಕು ಚೆಲ್ಲುವ ‘ದಿ ಲಾರ್ಡ್ಸ್ ಆಫ್‌ ವಾಂಖೆಡೆ’ ಪುಸ್ತಕವು ಕ್ರೀಡಾ ಅಭಿಮಾನಿಗಳಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿಸುತ್ತದೆ. ಮಾತ್ರವಲ್ಲ, ಸಂಗ್ರಹ ಯೋಗ್ಯವಾಗಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಮಾತನಾಡಿ, ‘ಒಂದು ತಂಡವಾಗಿ ನಾವು ಹೇಗೆ ಸ್ಥಿರ ಪ್ರದರ್ಶನ ನೀಡುತ್ತೇವೆ ಎಂಬುದು ಮುಖ್ಯವಾಗುತ್ತದೆ. 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಮಹತ್ವದ ಗೆಲುವು ಸಾಧಿಸಿದ ನಂತರ ಭಾರತ ತಂಡವು ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. 2009ರಲ್ಲಿ ತಂಡವು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೆ ಏರಿದ್ದು ಅವಿಸ್ಮರಣೀಯ ಕ್ಷಣ’ ಎಂದು ಹೇಳಿದರು. ನಾಲ್ಕು ದಶಕಗಳ ಕಾಲ ಕ್ರಿಕೆಟಿಗರಾಗಿ, ಕೋಚ್‌ ಆಗಿ ಅನುಭವ ಹೊಂದಿರುವ ರಾಮನ್‌ ಮತ್ತು 30 ವರ್ಷ ಕ್ರೀಡಾ ಪತ್ರಕರ್ತರಾಗಿ ಅನುಭವ ಹೊಂದಿರುವ ಕೌಶಿಕ್‌ ಅವರು ಭಾರತದಲ್ಲಿ ಕ್ರಿಕೆಟ್‌ನ ಬೆಳವಣಿಗೆಯ ಕುರಿತು ಆಳವಾದ ಅಧ್ಯಯನ ನಡೆಸಿ ಕೃತಿಯನ್ನು ಹೊರತಂದಿದ್ದಾರೆ. ವಿಶೇಷವಾಗಿ 1983 ಮತ್ತು 2011ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆಲುವಿನ ಜತೆಗೆ ಭಾರತ ಕ್ರಿಕೆಟ್‌ ತಂಡದ ಏರಿಳಿತಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.