ವಿಶ್ವದಾಖಲೆ ಉತ್ತಮಪಡಿಸಿಕೊಂಡ ಸುಮಿತ್‌ ಹಾಂಗ್‌ಝೌ: ಹಾಲಿ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಸುಮಿತ್ ಅಂಟಿಲ್ ಅವರು ಇಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್‌ ಗೇಮ್ಸ್‌ನ ಜಾವೆಲಿನ್‌ ಎಸೆತದಲ್ಲಿ ಚಿನ್ನದ ಸಾಧನೆಯ ಜತೆಗೆ ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಉತ್ತಮಪಡಿಸಿಕೊಂಡರು. ಕೂಟದ ಮೂರನೇ ದಿನವಾದ ಬುಧವಾರ ಭಾರತದ ಸ್ಪರ್ಧಾಳುಗಳು 30 ಪದಕಗಳನ್ನು ಗೆದ್ದುಕೊಂಡರು. ‌‌ಅವುಗಳಲ್ಲಿ 6 ಚಿನ್ನ ಸೇರಿದಂತೆ 17 ಪದಕಗಳು ಅಥ್ಲೆಟಿಕ್ಸ್‌ನಿಂದಲೇ ಬಂದವು. ಮೂರು ದಿನಗಳಲ್ಲಿ ಭಾರತವು 15 ಚಿನ್ನ, 20 ಬೆಳ್ಳಿ, 29 ಕಂಚು ಸೇರಿದಂತೆ ಒಟ್ಟು 64 ಪದಕಗಳನ್ನು ಗೆದ್ದುಕೊಂಡು ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಚೀನಾವು ತನ್ನ ಪಾರಮ್ಯವನ್ನು ಮುಂದುವರಿಸಿದ್ದು, ಈತನಕ 118 ಚಿನ್ನ ಸೇರಿದಂತೆ 300 ಪದಕಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ. ಇರಾನ್‌ 73 ಮತ್ತು ಜಪಾನ್‌ 69 ಪದಕಗಳನ್ನು ಗೆದ್ದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. 25 ವರ್ಷದ ಸುಮಿತ್ ಅವರು ಪ್ಯಾರಿಸ್‌ನಲ್ಲಿ ಕಳೆದ ವರ್ಷ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 70.83 ಮೀ. ದೂರ ಜಾವೆಲಿನ್‌ ಎಸೆದು ವಿಶ್ವದಾಖಲೆ ನಿರ್ಮಿಸಿದ್ದರು. ಈ ಕೂಟದಲ್ಲಿ ಅವರು ಎಫ್‌ 64 ವಿಭಾಗದ ಸ್ಪರ್ಧೆಯಲ್ಲಿ 73.29 ಮೀ ದೂರ ಎಸೆದು ತಮ್ಮದೇ ದಾಖಲೆಯನ್ನು ಮತ್ತಷ್ಟು ಭದ್ರಗೊಳಿಸಿದರು. ಇದೇ ಸ್ಪರ್ಧೆಯಲ್ಲಿ ಭಾರತದ ಪುಷ್ಪೇಂದ್ರ ಸಿಂಗ್ ಕಂಚಿನ ಪದಕ ಗೆದ್ದರು. ಸುಮಿತ್‌ ಅವರು 2015ರಲ್ಲಿ ನಡೆದ ಬೈಕ್ ಅಪಘಾತದಲ್ಲಿ ಎಡಗಾಲಿನ ಮೊಣಕಾಲಿನ ಕೆಳಗಿನ ಭಾಗವನ್ನು ಕಳೆದುಕೊಂಡಿದ್ದರು. ಭಾರತದ ಮತ್ತೊಬ್ಬ ಪ್ಯಾರಾ ಜಾವೆಲಿನ್‌ಪಟು ಸುಂದರ್ ಸಿಂಗ್ ಗುರ್ಜಾರ್ ಪುರುಷರ ಎಫ್ 46 ವಿಭಾಗದಲ್ಲಿ ಜಾವೆಲಿನ್‌ ಅನ್ನು 68.60 ಮೀ ದೂರ ಎಸೆದು, ಚಿನ್ನ ಗೆಲ್ಲುವ ಜತೆಗೆ ವಿಶ್ವದಾಖಲೆಯನ್ನು ನಿರ್ಮಿಸಿದರು. ಈ ಹಾದಿಯಲ್ಲಿ ಅವರು ಶ್ರೀಲಂಕಾದ ದಿನೇಶ್ ಮುದಿಯನ್ಸೆಲಾಗೆ ಹೆರಾತ್ ಹೆಸರಿನಲ್ಲಿದ್ದ (67.79 ಮೀ) ದಾಖಲೆ ಮುರಿದರು. ಈ ವಿಭಾಗದಲ್ಲಿ ಮೂರು ಪದಕಗಳು ಭಾರತಕ್ಕೆ ದಕ್ಕಿದವು. ರಿಂಕು (67.08 ಮೀ) ಮತ್ತು ಅಜಿತ್ ಸಿಂಗ್ (63.52 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. ಅಂಕುರ್ ಧಾಮ ಅವರು ಪುರುಷರ ಟಿ11– 1500 ಮೀ. ಓಟದಲ್ಲಿ ಚಿನ್ನದ ಸಾಧನೆ ಮಾಡಿದರು. ಮಂಗಳವಾರ ಅವರು ಪುರುಷರ ಟಿ11– 5000 ಮೀ. ಓಟದಲ್ಲಿ ಬಂಗಾರ ಗೆದ್ದಿದ್ದರು. ಮಹಿಳೆಯರ ಟಿ11– 1500 ಮೀ. ಸ್ಪರ್ಧೆಯಲ್ಲಿ ಭಾರತದ ರಕ್ಷಿತಾ ರಾಜು (ಚಿಕ್ಕಮಗಳೂರು) ಮತ್ತು ಕಿಲ್ಲಾಕ ಲಲಿತಾ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪಡೆದರು. ಪುರುಷರ ಎಫ್ 37/38 ಜಾವೆಲಿನ್ ಎಸೆತದಲ್ಲಿ ಹ್ಯಾನಿ ಮತ್ತು ಮಹಿಳೆಯರ ಟಿ47– ಲಾಂಗ್ ಜಂಪ್ ಸ್ಪರ್ಧೆಗಳಲ್ಲಿ ನಿಮಿಷಾ ಸುರೇಶ್ ಚಿನ್ನದ ಸಾಧನೆ ಮಾಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.