ಫ್ರೆಂಚ್‌ ಓಪನ್‌: ಸೇನ್‌, ಶ್ರೀಕಾಂತ್ ನಿರ್ಗಮನ ರೆನ್‌, ಫ್ರಾನ್ಸ್‌: ಭಾರತದ ಬ್ಯಾಡ್ಮಿಂಟನ್‌ ಆಟಗಾರರಾದ ಕಿದಂಬಿ ಶ್ರೀಕಾಂತ್‌ ಮತ್ತು ಲಕ್ಷ್ಯ ಸೇನ್‌ ಅವರು ಬುಧವಾರ ಫ್ರೆಂಚ್‌ ಓಪನ್‌ ಸೂಪರ್ 750 ಟೂರ್ನಿಯ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದರು. ವಿಶ್ವದ 22ನೇ ಕ್ರಮಾಂಕದ ಶ್ರೀಕಾಂತ್‌ ಅವರು 17–21, 15–21ರಿಂದ ಫ್ರಾನ್ಸ್‌ನ ತೋಮಾ ಜೂನಿಯರ್ ಪೊಪೊವ್ ಅವರಿಗೆ ಮಣಿದರು. 44 ನಿಮಿಷಗಳ ಮ್ಯಾರಥಾನ್‌ನಲ್ಲಿ 25ನೇ ಕ್ರಮಾಂಕದ ತೋಮಾ ನಿಖರ ಆಟದ ಮೂಲಕ ಮೇಲುಗೈ ಸಾಧಿಸಿ, ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಈತನಕದ ನಾಲ್ಕು ಮುಖಾಮುಖಿಯಲ್ಲಿ ಸೇನ್‌ ಮೊದಲ ಬಾರಿ ಪರಾಭವಗೊಂಡರು. ಮತ್ತೊಂದು ಪಂದ್ಯದಲ್ಲಿ ಲಕ್ಷ್ಯ ಸೇನ್‌ ಅವರು ಫ್ರಾನ್ಸ್‌ನ ಮತ್ತೊಬ್ಬ ಆಟಗಾರ ಅರ್ನಾಡ್ ಮಾರ್ಕೆಲ್ ಅವರಿಗೆ ಶರಣಾದರು. 55 ನಿಮಿಷಗಳ ಹೋರಾಟದಲ್ಲಿ 15–21, 18–21 ರಿಂದ ಮಾರ್ಕೆಲ್‌ ಗೆಲುವು ಸಾಧಿಸಿದರು. 2016ರಲ್ಲಿ ಜೂನಿಯರ್‌ ವಿಭಾಗದ ಸ್ಪರ್ಧೆಯಲ್ಲಿ ಲಕ್ಷ್ಯ ಮತ್ತು ಮಾರ್ಕೆಲ್‌ ಕೊನೆಯ ಬಾರಿ ಮುಖಾಮುಖಿಯಾಗಿದ್ದಾಗ ಭಾರತದ ಆಟಗಾರ ಮೇಲುಗೈ ಸಾಧಿಸಿದ್ದರು. ಬಿಡಬ್ಲ್ಯುಎಫ್‌ ಟೂರ್ನಿಯಲ್ಲಿ ಇದು ಮೊದಲ ಮುಖಾಮುಖಿಯಾಗಿದೆ. ಕಳೆದ ವಾರ ನಡೆದ ಡೆನ್ಮಾರ್ಕ್‌ ಓಪನ್‌ ಟೂರ್ನಿಯಲ್ಲೂ ಸೇನ್‌ ಮತ್ತು ಶ್ರೀಕಾಂತ್‌ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.