ಫಿಡೆ ಗ್ರ್ಯಾಂಡ್‌ ಸ್ವಿಸ್‌ ಚೆಸ್‌: ವಿದಿತ್‌, ವೈಶಾಲಿಗೆ ಪ್ರಶಸ್ತಿ ಐಲ್‌ ಆಫ್ ಮ್ಯಾನ್: ಆರ್‌.ವೈಶಾಲಿ ಮತ್ತು ವಿದಿತ್‌ ಗುಜರಾತಿ ಅವರು ಫಿಡೆ ಗ್ರ್ಯಾಂಡ್‌ ಸ್ವಿಸ್‌ ಚೆಸ್‌ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಓಪನ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಆ ಮೂಲಕ ಭಾರತ ‘ಅಪರೂಪದ ಡಬಲ್‌’ ಪ್ರಶಸ್ತಿ ಗೌರವಕ್ಕೆ ಪಾತ್ರವಾಯಿತು. ಇಬ್ಬರೂ ಮುಂದಿನ ವರ್ಷ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆದರು. ಕೆನಡಾದ ಟೋರಾಂಟೊದಲ್ಲಿ ಕ್ಯಾಂಡಿಡೇಟ್ಸ್‌ ಟೂರ್ನಿ ನಡೆಯಲಿದ್ದು, ವಿಜೇತರಾಗುವ ಆಟಗಾರ, ವಿಶ್ವ ಚಾಂಪಿಯನ್‌ಗೆ ಸವಾಲು ಹಾಕುವ ಅರ್ಹತೆ ಪಡೆಯುತ್ತಾರೆ. ಈ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ವೈಶಾಲಿ ಭಾನುವಾರ ರಾತ್ರಿ ನಡೆದ ಅಂತಿಮ (11ನೇ) ಸುತ್ತಿನಲ್ಲಿ ಮಂಗೋಲಿಯಾದ ಬಟ್ಖುಯಾಗ್ ಮುಂಗುತೂಲ್ ಅವರನ್ನು ಸೋಲಿಸಿದರು. ವಿದಿತ್‌ ಓಪನ್ ವಿಭಾಗದ ಅಂತಿಮ (11ನೇ) ಸುತ್ತಿನಲ್ಲಿ ಸರ್ಬಿಯಾದ ಅಲೆಕ್ಸಾಂಡರ್ ಪ್ರೆಡ್ಕೆ ಅವರನ್ನು ಸೋಲಿಸಿ ಏಳನೇ ಜಯ ದಾಖಲಿಸಿ ಅಗ್ರಸ್ಥಾನಕ್ಕೇರಿದರು. ಇಬ್ಬರೂ ತಮ್ಮ ವಿಭಾಗಗಳಲ್ಲಿ ತಲಾ 8.5 ಪಾಯಿಂಟ್ಸ್‌ ಸಂಗ್ರಹಿಸಿದರು. ಇದು ಎರಡನೇ ಸ್ಥಾನದಲ್ಲಿರುವ ಸ್ಪರ್ಧಿಗಳಿಗಿಂತ ಅರ್ಧ ಪಾಯಿಂಟ್‌ ಹೆಚ್ಚು. ವೈಶಾಲಿ ಪ್ರಶಸ್ತಿ ಜೊತೆಗೆ ಸುಮಾರು ₹20 ಲಕ್ಷ ಬಹುಮಾನ ಪಡೆದರೆ, ವಿದಿತ್‌ ₹66 ಲಕ್ಷ ನಗದು ಮೊತ್ತವನ್ನು ಬಹುಮಾನವಾಗಿ ಜೇಬಿಗಿಳಿಸಿದರು. ಮಹಿಳೆಯರ ವಿಭಾಗದಲ್ಲಿ ಉಕ್ರೇನ್‌ನ ಅನ್ನಾ ಮುಝಿಚುಕ್ ಎರಡನೇ ಸ್ಥಾನ ಪಡೆದರು. ಅವರು ಅಂತಿಮ ಸುತ್ತಿನಲ್ಲಿ ಸ್ವೀಡನ್‌ನ ಅನುಭವಿ ಪಿಯಾ ಕ್ರಾಮ್ಲಿಂಗ್ ಅವರನ್ನು ಮಣಿಸಿದರು. ಮೂರನೇ ಸ್ಥಾನ ಪಡೆದ ಚೀನಾದ ತಾನ್ ಝೊಂಗ್‌ಇ ಕೂಡ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಸಂಪಾದಿಸಿದರು. ಮುಝಿಚುಕ್ ವಿಶ್ವಕಪ್‌ ಗೆಲುವಿನ ಮೂಲಕ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದ ಕಾರಣ ತಾನ್‌ಗೆ ಇಲ್ಲಿ ಅವಕಾಶ ದೊರೆಯಿತು. ಪುರುಷರ ವಿಭಾಗದ ‘ಟಾಪ್‌ ಬೋರ್ಡ್‌’ನಲ್ಲಿ ಕಪ್ಪು ಕಾಯಿಗಳಲ್ಲಿ ಆಡಿದ ಹಿಕಾರು ನಕಾಮುರಾ (8 ಪಾಯಿಂಟ್ಸ್‌), ಭಾರತದ ಅರ್ಜುನ್‌ ಇರಿಗೇಶಿ (7.5) ವಿರುದ್ದ ಡ್ರಾ ಮಾಡಿಕೊಂಡರು. ಅಮೆರಿಕದ ನಕಾಮುರಾ ಎರಡನೇ ಸ್ಥಾನ ಪಡೆದರೆ, ಅರ್ಜುನ್ ನಾಲ್ಕನೇ ಸ್ಥಾನ ಪಡೆದರು. ರಷ್ಯದ ಆ್ಯಂಡ್ರಿ ಇಸಿಪೆಂಕೊ (7.5) ಮೂರನೇ ಸ್ಥಾನ ಗಳಿಸಿದರು. ಡಚ್‌ ಗ್ರ್ಯಾಂಡ್‌ಮಾಸ್ಟರ್‌ ಅನೀಶ್ ಗಿರಿ (7.5) ಅವರು ಕೊನೆಯ ಸುತ್ತಿನಲ್ಲಿ ಇಸಿಪೆಂಕೊ ಅವರನ್ನು ಸೋಲಿಸಿದರು. ಅರವಿಂದ್ ಚಿದಂಬರಂ 30ನೇ ಮತ್ತು ಎಸ್‌.ಎಲ್‌.ನಾರಾಯಣನ್ 32ನೇ ಸ್ಥಾನ ಗಳಿಸಿದರು. ನಿಹಾಲ್ ಸರಿನ್ 45ನೇ ಸ್ಥಾನ ಗಳಿಸಿದರು. ರಮೇಶ್ ಬಾಬು ಸಂತಸ ಬೆಂಗಳೂರು: ಚೆನ್ನೈನ ಬ್ಯಾಂಕ್ ಉದ್ಯೋಗಿ ರಮೇಶ್ ಬಾಬು ಅವರ ಇಬ್ಬರು ಮಕ್ಕಳು – ಪ್ರಜ್ಞಾನಂದ ಮತ್ತು ವೈಶಾಲಿ– ಪ್ರತಿಷ್ಠಿತ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆದಿದ್ದಾರೆ. ಅಕ್ಕ–ತಮ್ಮ ಇಂಥ ದೊಡ್ಡ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದಿದ್ದು ಇದೇ ಮೊದಲು. ಸಹಜವಾಗಿ ಅವರ ಸಂಭ್ರಮ ಹೇಳತೀರದಾಗಿತ್ತು. ಕಳೆದ ಆಗಸ್ಟ್‌ನಲ್ಲಿ ವಿಶ್ವಕಪ್‌ ರನ್ನರ್‌ ಅಪ್‌ ಆದಾಗಲೇ ‘ಪ್ರಗ್ಗು’ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆದಿದ್ದರು. ‘ವೈಶಾಲಿ ಚಾಂಪಿಯನ್‌ ಆಗುವ ನಿರೀಕ್ಷೆ ಹೊಂದಿರಲಿಲ್ಲ. ಆದರೆ ತುಂಬಾ ಶ್ರಮ ಹಾಕಿದ್ದಳು. ತುಂಬಾ ಚೆನ್ನಾಗಿಯೂ ಆಡಿದಳು’ ಎಂದು ರಮೇಶ್ ಬಾಬು ಚೆನ್ನೈನಿಂದ ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕ್ಯಾಂಡಿಡೇಟ್ಸ್‌ ಟೂರ್ನಿಯ ಮೊದಲು ಯಾವುದೇ ಯೋಜನೆ ಹಾಕಿಕೊಂಡಿಲ್ಲ. ಮಕ್ಕಳಿಬ್ಬರೂ ಬಂದ ಮೇಲೆ ಆ ಬಗ್ಗೆ ಯೋಜನೆ ರೂಪಿಸುತ್ತೇವೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.