ಹಾಕಿ: ಆರನೇ ಸ್ಥಾನಕ್ಕೇರಿದ ಮಹಿಳಾ ತಂಡ ನವದೆಹಲಿ: ಭಾರತ ಮಹಿಳಾ ಹಾಕಿ ತಂಡವು ಎಫ್‌ಐಎಚ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮತ್ತೆ ಆರನೇ ಸ್ಥಾನಕ್ಕೇರಿದೆ. ರಾಂಚಿಯಲ್ಲಿ ಭಾನುವಾರ ಕೊನೆಗೊಂಡ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಚಿನ್ನ ಜಯಿಸಿದ್ದು, ಎರಡು ಸ್ಥಾನ ಮೇಲಕ್ಕೇರಲು ಕಾರಣ. ಸವಿತಾ ಪೂನಿಯಾ ಬಳಗ ಈ ಟೂರ್ನಿಗೂ ಮುನ್ನ ಎಂಟನೇ ಸ್ಥಾನದಲ್ಲಿತ್ತು. 2368.83 ರೇಟಿಂಗ್‌ ಪಾಯಿಂಟ್ಸ್‌ಗಳೊಂದಿಗೆ ಭಾರತ ತಂಡ ಇಂಗ್ಲೆಂಡ್‌ಗಿಂತ ಒಂದು ಸ್ಥಾನ ಮುಂದಿದೆ. ಕಳೆದ ವರ್ಷ ಜೂನ್‌ನಲ್ಲಿ ಆರನೇ ಸ್ಥಾನದಲ್ಲಿದ್ದ ತಂಡ, ಬಳಿಕ ಕುಸಿತ ಕಂಡಿತ್ತು. 3422.40 ಪಾಯಿಂಟ್ಸ್‌ಗಳೊಂದಿಗೆ ನೆದರ್ಲೆಂಡ್ಸ್‌ ತಂಡ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾ ತಂಡಗಳು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಗಳಲ್ಲಿವೆ. ಭಾರತಕ್ಕಿಂತ ಮುಂದಿರುವ ಇನ್ನೆರಡು ತಂಡಗಳೆಂದರೆ ಬೆಲ್ಜಿಯಂ ಮತ್ತು ಜರ್ಮನಿ. ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೇಲಕ್ಕೇರಿರುವುದು ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ಸಜ್ಜಾಗಲಿರುವ ಭಾರತ ತಂಡದ ಆಟಗಾರ್ತಿಯರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಒಲಿಂಪಿಕ್ಸ್‌ ಅರ್ಹತಾ ಟೂರ್ನಿ ರಾಂಚಿಯಲ್ಲಿ ಮುಂದಿನ ಜ.13 ರಿಂದ 19ರ ವರೆಗೆ ನಡೆಯಲಿದೆ. ಭಾರತ ತಂಡವು ಜರ್ಮನಿ, ನ್ಯೂಜಿಲೆಂಡ್, ಜಪಾನ್‌, ಚಿಲಿ, ಅಮೆರಿಕ, ಇಟಲಿ ಮತ್ತು ಜೆಕ್‌ ರಿಪಬ್ಲಿಕ್‌ ತಂಡಗಳ ಜತೆ ಪೈಪೋಟಿ ನಡೆಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.