ವೈಶಾಲಿಗೆ ಮಣಿದ ಮಾಜಿ ಮಹಿಳಾ ವಿಶ್ವ ಚಾಂಪಿಯನ್ ಐಲ್‌ ಆಫ್‌ ಮ್ಯಾನ್ (ಯುಕೆ): ಮಾಜಿ ವಿಶ್ವ ಮಹಿಳಾ ಚೆಸ್‌ ಚಾಂಪಿಯನ್ ಮರಿಯಾ ಮುಝಿಚುಕ್ ಅವರ ರಕ್ಷಣಾಕೋಟೆಯನ್ನು ಛಿದ್ರಗೊಳಿಸಿದ ಭಾರತದ ಆಟಗಾರ್ತಿ ಆರ್‌.ವೈಶಾಲಿ, ಫಿಡೆ ಮಹಿಳಾ ಗ್ರ್ಯಾಂಡ್‌ ಸ್ವಿಸ್‌ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಜಯಗಳಿಸಿರು. ಅವರು 4 ಸುತ್ತುಗಳಿಂದ 3.5 ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಕತಾರ್‌ ಓಪನ್‌ನಲ್ಲಿ ಮೂರನೇ ಜಿಎಂ ನಾರ್ಮ್ ಪಡೆದಿರುವ ವೈಶಾಲಿ ಗ್ರ್ಯಾಂಡ್‌ಮಾಸ್ಟರ್‌ ಪದವಿಗೆ ಹತ್ತಿರವಾಗಿದ್ದು, ದೊಡ್ಡ ಸವಾಲುಗಳಿಗೆ ಸಜ್ಜಾಗಿರುವುದನ್ನು ಈ ಪಂದ್ಯದಲ್ಲಿ ತೋರಿಸಿದರು. ಅವರ ಆಕ್ರಮಣಕಾರಿ ಆಟದ ಕೌಶಲ ಶನಿವಾರದ ಪಂದ್ಯದಲ್ಲಿ ಗಮನಸೆಳೆಯಿತು. ಮೊದಲು ಪ್ರಮುಖ ಪಡೆಯೊಂದನ್ನು ಕಳೆದುಕೊಂಡ ಮರಿಯಾ ನಂತರ ಚೆಕ್‌ ಮೇಟ್‌ ಬಲೆಯೊಳಗೆ ಸಿಲುಕಿ 23ನೇ ನಡೆಯಲ್ಲಿ ಸೋಲೊಪ್ಪಿಕೊಂಡರು. ಇದು ನಾಲ್ಕು ಪಂದ್ಯಗಳಲ್ಲಿ ವೈಶಾಲಿಗೆ ಮೂರನೇ ಜಯ. ಈ ಆಟಗಾರ್ತಿ, ಹೆಚ್ಚು ಪ್ರಸಿದ್ಧಿಪಡೆದಿರುವ ಆರ್‌.ಪ್ರಜ್ಞಾನಂದ ಅವರ ಅಕ್ಕ. ಓಪನ್ ವಿಭಾಗದಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್ ಇರಿಗೇಶಿ ಅವರು ಗೆಲುವಿನತ್ತ ಹೆಜ್ಜೆಯಿಡುವಂತೆ ಕಂಡರೂ ಅಂತಿಮವಾಗಿ ಅಲೆಕ್ಸಾಂಡರ್ ಪ್ರೆಡ್ಕೆ (ಸರ್ಬಿಯಾ) ಎದುರು ಪಾಯಿಂಟ್‌ ಹಂಚಿಕೊಳ್ಳುವುದಕ್ಕೆ ತೃಪ್ತಿಪಡಬೇಕಾಯಿತು. ಇಬ್ಬರೂ ತಲಾ ಮೂರು ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ವಿದಿತ್‌ ಸಂತೋಷ್ ಗುಜರಾತಿ ಅವರು ಯಶಸ್ಸಿನ ಓಟ ಮುಂದುವರಿಸಿ ಮೂರನೇ ಗೆಲುವನ್ನು ದಾಖಲಿಸಿದರು. ಈ ಬಾರಿ ಬಿಳಿ ಕಾಯಿಗಳಲ್ಲಿ ಆಡಿದ ಅವರು ಮಾಜಿ ವಿಶ್ವ ಚಾಂಪಿಯನ್‌ಷಿಪ್‌ ಚಾಲೆಂಜರ್ ಅಲೆಕ್ಸಿ ಶಿರೋವ್ (ಸ್ಪೇನ್‌) ಅವರನ್ನು ಮಣಿಸಿದರು. ಈ ಟೂರ್ನಿ ವಿಶ್ವ ಚಾಂಪಿಯನ್‌ಷಿಪ್‌ನ ಭಾಗವಾಗಿದೆ. ಓಪನ್ ವಿಭಾಗದಲ್ಲಿ ಮೊದಲ ಎರಡು ಸ್ಥಾನ ಗಳಿಸಿದ ಆಟಗಾರರು 2024ರ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆಯುತ್ತಾರೆ. ಮಹಿಳಾ ವಿಭಾಗದಲ್ಲಿ ಮೊದಲೆರಡು ಸ್ಥಾನ ಪಡೆದ ಆಟಗಾರ್ತಿಯರು ಮಹಿಳಾ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಪಡೆಯುತ್ತಾರೆ. ಕ್ಯಾಂಡಿಡೇಟ್ಸ್‌ ಟೂರ್ನಿಯ ವಿಜೇತ ಆಟಗಾರ, ವಿಶ್ವ ಚಾಂಪಿಯನ್ ಆಟಗಾರನಿಗೆ ಸವಾಲು ಹಾಕುವ ಅರ್ಹತೆ ಗಿಟ್ಟಿಸುತ್ತಾರೆ. ಮೊದಲ ಬೋರ್ಡ್‌ನಲ್ಲಿ ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನ (ಇಟಲಿ, 3), ಉಜ್ಬೇಕಿಸ್ತಾನದ ಜಾವೊಕಿರ್‌ ಸಿಂದರೋವ್ (3) ಜೊತೆ ಪಾಯಿಂಟ್ ಹಂಚಿಕೊಂಡರು. ಡಿ.ಗುಕೇಶ್ (2) ಅವರು ಇವಾನ್ ಸರಿಕ್ (2) ಜೊತೆ ಡ್ರಾ ಮಾಡಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.