ಗೆಲುವಿನೊಡನೆ ಅಗ್ರಸ್ಥಾನಕ್ಕೇರಿದ ವಿದಿತ್ ಐಲ್‌ ಆಫ್‌ ಮ್ಯಾನ್: ಭಾರತದ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ ಅವರು ಅತ್ಯುತ್ತಮ ಆಟ ಮುಂದುವರಿಸಿ ಏಳನೇ ಸುತ್ತಿನಲ್ಲಿ ಉಜ್ಬೇಕಿಸ್ತಾನದ ಜಾವೊಖಿರ್‌ ಸಿಂದರೋವ್ ಅವರನ್ನು ಮಣಿಸಿದರು. ಆ ಮೂಲಕ ಫಿಡೆ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಯಲ್ಲಿ ಐದೂವರೆ ಪಾಯಿಂಟ್ಸ್‌ ಸಂಗ್ರಹಿಸಿ ಏಕಾಂಗಿಯಾಗಿ ಅಗ್ರಸ್ಥಾನಕ್ಕೇರಿದರು. ಮಹಿಳೆಯರ ವಿಭಾಗದಲ್ಲಿ ಆರ್‌.ವೈಶಾಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಮೂರನೇ ಬೋರ್ಡ್‌ನಲ್ಲಿ ವಿದಿತ್‌ ಎದುರು ರೂಕ್‌ ಪಡೆಯಲು ಉಜ್ಬೇಕ್‌ ಆಟಗಾರ ಎರಡು ‘ಮೈನರ್‌ ಪೀಸ್‌’ಗಳನ್ನು (ನೈಟ್‌, ಬಿಷಪ್‌ಗಳಿಗೆ ಈ ಪದ ಬಳಸುತ್ತಾರೆ) ಕಳೆದುಕೊಂಡರು. ನಂತರ ವಿದಿತ್‌ ಎದುರಾಳಿಯ ಮೇಲೆ ಒತ್ತಡ ಹೇರಿ 57 ನಡೆಗಳಲ್ಲಿ ಜಯಶಾಲಿಯಾದರು. ಮೊದಲ ಸುತ್ತಿನಲ್ಲಿ ಸೋತ ನಂತರ ವಿದಿತ್‌, ಐದು ಗೆಲುವು, ಒಂದು ಡ್ರಾ ಫಲಿತಾಂಶದೊಡನೆ ಅಜೇಯರಾಗಿ ಉಳಿದಿದ್ದಾರೆ. ಈ ಗೆಲುವಿನೊಡನೆ ಮಹಾರಾಷ್ಟ್ರದ ನಾಸಿಕ್‌ನ ಆಟಗಾರನಿಗೆ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಇರುವ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆಯುವ ಅವಕಾಶ ಉಜ್ವಲವಾಗಿದೆ. ಇನ್ನು ನಾಲ್ಕು ಸುತ್ತಿನ ಆಟಗಳು ಬಾಕಿವುಳಿದಿವೆ. ಮೊದಲ ಐದು ಬೋರ್ಡ್‌ಗಳಲ್ಲಿ ಉಳಿದ ನಾಲ್ಕು ಪಂದ್ಯಗಳು ಡ್ರಾ ಆದವು. ಭಾರತದ ಇನ್ನೊಬ್ಬ ಆಟಗಾರ ಅರ್ಜುನ್ ಇರಿಗೇಶಿ ನಾಲ್ಕನೇ ಬೋರ್ಡ್‌ನಲ್ಲಿ ಆ್ಯಂಡ್ರಿ ಇಸಿಪೆಂಕೊ (ರಷ್ಯಾ) ಎದುರು ‘ಡ್ರಾ’ ಮಾಡಿಕೊಂಡರು. ಅವರು ಐದು ಪಾಯಿಂಟ್ಸ್‌ ಸಂಗ್ರಹಿಸಿದ್ದು ಇತರ 10 ಆಟಗಾರರೊಂದಿಗೆ ಎರಡನೆ ಸ್ಥಾನದಲ್ಲಿದ್ದಾರೆ. ಅರ್ಜುನ್, ಇಸಿಪೆಂಕೊ ಜೊತೆ ಪೋಲೆಂಡ್‌ನ ರಾಡೊಸ್ಲಾವ್ ವೊಯ್ತಾಷೆಕ್, ಅಮೆರಿಕದ ಫ್ಯಾಬಿಯಾನೊ ಕರುವಾನ, ಹಿಕಾರು ನಕಾಮುರಾ, ಸರ್ಬಿಯಾದ ಅಲೆಕ್ಸಾಂಡರ್ ಪ್ರಾಡ್ಕೆ, ಫ್ರಾನ್ಸ್‌ನ ಎಟಿನೆ ಬ್ಯಾಕ್ರೊಟ್‌, ಜರ್ಮನಿಯ ವಿನ್ಸೆಂಟ್‌ ಕೀಮರ್, ರುಮೇನಿಯಾದ ಡೇನಿಯಲ್ ಬೊಗ್ದಾನ್ ಡೇಕ್, ಉಕ್ರೇನ್‌ನ ಯೂರಿ ಕುಝುಬೋವ್ ಮತ್ತು ರಷ್ಯಾದ ವ್ಲಾದಿಮಿರ್‌ ಫೆಡೊಸೀವ್ ತಲಾ ಐದು ಅಂಕ ಗಳಿಸಿದ್ದಾರೆ. ಮೊದಲ ಬೋರ್ಡ್‌ನಲ್ಲಿ ವೊಯ್ತಾಷೆಕ್, ಕರುವಾನ ಜೊತೆ, ಎರಡನೇ ಬೋರ್ಡ್‌ನಲ್ಲಿ ನಕಾಮುರಾ, ಸರ್ಬಿಯಾದ ಅಲೆಕ್ಸಾಂಡರ್‌ ಪ್ರಾಡ್ಕೆ ಜೊತೆ ಡ್ರಾ ಮಾಡಿಕೊಂಡರು. ಆರರಿಂದ ಹತ್ತರವೆಗಿನ ಬೋರ್ಡ್‌ಗಳಲ್ಲಿ ನಿರ್ಣಾಯಕ ಫಲಿತಾಂಶಗಳು ಬಂದು ಬಿಳಿ ಕಾಯಿಗಳಲ್ಲಿ ಆಡಿದ ಆಟಗಾರರೇ ವಿಜಯಿಯಾದರು. ಇರಾನ್‌ನ ಪರ್ಹಾಮ್ ಮಘಸುಡ್ಲೂ (4.5), ಭಾರತದ ಅರವಿಂದ ಚಿದಂಬರಂ (3.5)ಅವರನ್ನು, ಲೆವೊನ್ ಅರೊನಿಯನ್ (ಅಮೆರಿಕ) ಅವರು ಭಾರತದ ಎಸ್‌.ಎಲ್‌. ನಾರಾಯಣನ್ ಅವರನ್ನು ಸೋಲಿಸಿದರು. ಪ್ರಜ್ಞಾನಂದ (4) ಮತ್ತು ಗುಕೇಶ್ (3) ಮೊದಲ ಜಯ ದಾಖಲಿಸಿದರೆ, ರೋನಕ್ ಸಾಧ್ವಾನಿ ಸೋಲನುಭವಿಸಿದರು. ಮಹಿಳೆಯರ ವಿಭಾಗದಲ್ಲಿ ವೈಶಾಲಿ, ಕಜಕಸ್ತಾನದ ಬಿಬಿಸಾರಾ ಅಸ್ಸೌಬುಯೇವಾ ಅವರನ್ನು ಸೋಲಿಸಿದರು. ಐದೂವರೆ ಪಾಯಿಂಟ್ಸ್ ಸಂಗ್ರಹಿಸಿರುವ ಅವರು ಉಕ್ರೇನ್‌ನ ಅನ್ನಾ ಮುಝಿಚುಕ್ ಮತ್ತು ಬಲ್ಗೇರಿಯಾದ ಅಂಟೊನೇಟಾ ಸ್ಟೆಫಾನೊವಾ ಜೊತೆ ಅಗ್ರಸ್ಥಾನಕ್ಕೇರಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.