ಫಿಡೆ ಗ್ರ್ಯಾಂಡ್‌ ಚೆಸ್‌: ಅಗ್ರಸ್ಥಾನಕ್ಕೆ ಹೆಚ್ಚಿದ ಪೈಪೋಟಿ ಐಲ್‌ ಆಫ್‌ ಮ್ಯಾನ್: ಒಂದು ದಿನ ಹಿಂದಿನವರೆಗೆ ಮುನ್ನಡೆಯಲ್ಲಿದ್ದ ಭಾರತದ ವಿದಿತ್‌ ಎಸ್‌.ಗುಜರಾತಿ ಅವರು ಫಿಡೆ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಯ ಎಂಟನೇ ಸುತ್ತಿನ ಮೊದಲ ಬೋರ್ಡ್‌ನಲ್ಲಿ ಅಮೆರಿಕದ ಹಿಕಾರು ನಕಾಮುರಾ ಜೊತೆ ಬೇಗನೇ ಪಾಯಿಂಟ್‌ ಹಂಚಿಕೊಂಡರು. ಎಂಟನೇ ಸುತ್ತಿನಲ್ಲಿ ಪೂರ್ಣ ಪಾಯಿಂಟ್‌ ಪಡೆದ ಮೂರು ಮಂದಿ ಆಟಗಾರರು ತಲಾ ಆರು ಪಾಯಿಂಟ್‌ಗಳೊಡನೆ ಈಗ ವಿದಿತ್‌ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಇನ್ನು ಮೂರು ಸುತ್ತಿನ ಪಂದ್ಯಗಳು ಉಳಿದಿರುವಂತೆ, ವಿದಿತ್‌, ಅಮೆರಿಕದ ಫ್ಯಾಬಿಯಾನೊ ಕರುವಾನ, ರಷ್ಯಾದ ಆ್ಯಂಡ್ರಿ ಇಸಿಪೆಂಕೊ ಮತ್ತು ಮತ್ತು ಡೇನಿಯಲ್ ಬೊಗ್ದಾನ್ ಡೇಕ್‌ ಅವರು ತಲಾ ಆರು ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ₹3.83 ಕೋಟಿ ಬಹುಮಾನ ಈ ಟೂರ್ನಿಯಲ್ಲಿ ಈಗ ಅಗ್ರಸ್ಥಾನಕ್ಕೆ ಪೈಪೋಟಿ ತೀವ್ರಗೊಂಡಿದೆ. ಬಿಳಿ ಕಾಯಿಗಳಲ್ಲಿ ಆಡಿದ ವಿದಿತ್‌ ಬರೇ 16 ನಡೆಗಳಲ್ಲೇ ಡ್ರಾ ಕೊಡುಗೆ ಒಪ್ಪಿಕೊಂಡರು. ಅಗ್ರ ಶ್ರೇಯಾಂಕದ ಕರುವಾನ ಎರಡನೇ ಬೋರ್ಡ್‌ನಲ್ಲಿ ಫ್ರೆಂಚ್‌ ಗ್ರ್ಯಾಂಡ್‌ಮಾಸ್ಟರ್‌ ಎಟಿನೆ ಬ್ಯಾಕ್ರೊಟ್ ಅವರನ್ನು ಸೋಲಿಸಿದರೆ, ಮೂರನೇ ಬೋರ್ಡ್‌ನಲ್ಲಿ ಆ್ಯಂಡ್ರಿ ಇಸಿಪೆಂಕೊ ಅವರು ಜರ್ಮನಿಯ ವಿನ್ಸೆಂಟ್‌ ಕೀಮರ್ ಅವರನ್ನು ಮಣಿಸಿದರು. ಐದನೇ ಬೋರ್ಡ್‌ನಲ್ಲಿ ಡೇನಿಯಲ್ ಬೊಗ್ದಾನ್, ಪೋಲೆಂಡ್‌ನ ರಾಡೊಸ್ಲಾವ್ ವೊಯ್ತಾಷೆಕ್ ಅವರನ್ನು ಸೋಲಿಸಿದರು. ನಾಲ್ಕನೇ ಬೋರ್ಡ್‌ನಲ್ಲಿ, ಬಿಳಿ ಕಾಯಿಗಳಲ್ಲಿ ಆಡಿದ ಅರ್ಜುನ್‌ ಇರಿಗೇಶಿ ಆರಂಭದಲ್ಲಿ ಎದುರಾಳಿ ಉಕ್ರೇನ್‌ನ ಯೂರಿ ಕುಝುಬೋವ್ ಅವರ ರಕ್ಷಣಾ ಕೋಟೆಗೆ ದಾಳಿಯಿಟ್ಟರು. ಅರ್ಜುನ್ ಗೆಲುವಿನತ್ತ ಸಾಗುವಂತೆ ಕಂಡಿದ್ದರೂ ಅಂತಿಮವಾಗಿ ‘ಡ್ರಾ’ಕ್ಕೆ ಸಹಿಹಾಕಿದರು. ಭಾರತದ ನಿಹಾಲ್ ಸರಿನ್ ಕೊನೆಯ ಕೆಲವು ಸುತ್ತುಗಳಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಎಂಟನೇ ಸುತ್ತಿನಲ್ಲಿ ಜರ್ಮನಿಯ ನಿಕ್ಲಾಸ್ ಹಷೆನ್‌ಬೆತ್‌ (4) ಅವರನ್ನು ಸೋಲಿಸಿದರು. ಕೇರಳ ಆಟಗಾರನ ಖಾತೆಯಲ್ಲಿ ಈಗ ಐದು ಪಾಯಿಂಟ್‌ಗಳಿವೆ. ಭಾರತದ ಇತರ ಆಟಗಾರರಾದ ಪಿ.ಹರಿಕೃಷ್ಣ (4), ಆರ್ಯನ್ ಚೋಪ್ರಾ (4) ಮತ್ತು ಎಸ್‌.ಎಲ್‌.ನಾರಾಯಣನ್ (4) ಅವರು ಎದುರಾಳಿಗಳಾದ (ಕ್ರಮವಾಗಿ) ಕಜಕಸ್ತಾನದ ರಿನತ್ ಜುಮಾಬಯೇವ್ (4.5), ಜರ್ಮನಿಯ ಮಥಾಯಸ್‌ ಬ್ಲುಬಾಮ್ (4) ಮತ್ತು ನಾರ್ವೆಯ ಆರ್ಯನ್ ತಾರಿ (4) ವಿರುದ್ಧ ಡ್ರಾ ಮಾಡಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.