ಮಹಿಳಾ ಹಾಕಿ: ಪ್ರಶಸ್ತಿಗೆ ಭಾರತ– ಜಪಾನ್‌ ಸೆಣಸು ರಾಂಚಿ: ಹೊಂದಾಣಿಕೆಯ ಆಟವಾಡಿದ ಭಾರತ ತಂಡದವರು ಮಹಿಳೆಯರ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಫೈನಲ್‌ ಪ್ರವೇಶಿಸಿದರು. ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಆತಿಥೇಯ ತಂಡ 2–0 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿತು. ಸಲೀಮಾ ಟೇಟೆ (11 ನೇ ನಿ.) ಮತ್ತು ವೈಷ್ಣವಿ ವಿ.ಫಾಲ್ಕೆ (19) ಅವರು ಭಾರತದ ಗೆಲುವಿಗೆ ಕಾರಣರಾದರು. ಸವಿತಾ ನೇತೃತ್ವದ ತಂಡವು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಜಪಾನ್‌ ವಿರುದ್ಧ ಹಣಾಹಣಿ ನಡೆಸಲಿದೆ. ದಿನದ ಮತ್ತೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಜಪಾನ್‌ 2–1 ಗೋಲುಗಳಿಂದ ಚೀನಾ ತಂಡವನ್ನು ಮಣಿಸಿತು. ಕಾನಾ ಯುರಾತ (34ನೇ ನಿ.) ಹಾಗೂ ಮಿಯು ಸುಜುಕಿ (44) ಅವರು ಜಪಾನ್‌ ಪರ ಚೆಂಡನ್ನು ಗುರಿ ಸೇರಿಸಿದರೆ, ಚೀನಾ ತಂಡದ ಏಕೈಕ ಗೋಲನ್ನು ತಿಯಾನ್‌ತಿಯಾನ್ ಲುವೊ (11) ತಂದಿತ್ತರು. ಕೊರಿಯಾ ವಿರುದ್ಧ ಆಕ್ರಮಣಕಾರಿ ಆಟವಾಡಿದ ಭಾರತ ವಿರಾಮದ ವೇಳೆಗೆ 2–0 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು. ಕೊನೆಯ ಎರಡು ಕ್ವಾರ್ಟರ್‌ಗಳಲ್ಲಿ ರಕ್ಷಣೆಗೆ ಒತ್ತು ನೀಡಿತು. ಎದುರಾಳಿ ತಂಡಕ್ಕೆ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲ್‌ಕೀಪರ್‌ ಸವಿತಾ ತಡೆದರು. ಕೊನೆಯ ಐದು ನಿಮಿಷಗಳಿರುವಾಗ ಭಾರತ ತಂಡದ ಜ್ಯೋತಿ ಮತ್ತು ವಂದನಾ ಕಟಾರಿಯಾ ರೆಡ್‌ ಕಾರ್ಡ್‌ ಪಡೆದು ಹೊರನಡೆದರು. ಆದರೂ ಎರಡು ಗೋಲುಗಳ ಮುನ್ನಡೆಯನ್ನು ಕೊನೆಯವರೆಗೂ ಕಾಪಾಡಿಕೊಳ್ಳಲು ಭಾರತ ಯಶಸ್ವಿಯಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.