ಚೆಸ್‌: ಅಗ್ರಸ್ಥಾನದಲ್ಲಿ ಮುಂದುವರಿದ ವೈಶಾಲಿ ಐಲ್‌ ಆಫ್‌ ಮ್ಯಾನ್, ಯುಕೆ: ಭಾರತದ ಆರ್‌.ವೈಶಾಲಿ ಅವರು ಇಲ್ಲಿ ನಡೆಯುತ್ತಿರುವ ಫಿಡೆ ಗ್ರ್ಯಾಂಡ್‌ ಸ್ವಿಸ್‌ ಚೆಸ್‌ ಟೂರ್ನಿಯ ಮಹಿಳಾ ವಿಭಾಗದ 10ನೇ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ‌ಚೀನಾದ ಝೊಂಗ್‌ಯಿ ತಾನ್ ಅವರನ್ನು ಮಣಿಸಿ ಒಂಟಿಯಾಗಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಮಾತ್ರವಲ್ಲ, ತಮ್ಮ ಲೈವ್‌ ರೇಟಿಂಗ್‌ ಪಾಯಿಂಟ್ಸ್‌ಅನ್ನು 2,498ಕ್ಕೆ ಹೆಚ್ಚಿಸಿಕೊಂಡಿರುವ ಅವರು ಗ್ರ್ಯಾಂಡ್‌ಮಾಸ್ಟರ್‌ ಪಟ್ಟಕ್ಕೆ ಇನ್ನಷ್ಟು ಸನಿಹ ಬಂದಿದ್ದಾರೆ. ಪ್ರಜ್ಞಾನಂದ ಅವರ ಅಕ್ಕ ವೈಶಾಲಿ, ಇನ್ನೆರಡು ಪಾಯಿಂಟ್ಸ್‌ ಗಳಿಸಿದರೆ ಗ್ರ್ಯಾಂಡ್‌ಮಾಸ್ಟರ್‌ ಎನಿಸಿಕೊಳ್ಳಲಿದ್ದಾರೆ. ಹಾಗಾದಲ್ಲಿ, ಜಿಎಂ ಪಟ್ಟ ಗಳಿಸಿದ ವಿಶ್ವದ ಮೊದಲ ಸಹೋದರ–ಸಹೋದರಿ ಎಂಬ ಗೌರವ ಪ್ರಜ್ಞಾನಂದ ಮತ್ತು ವೈಶಾಲಿ ಅವರಿಗೆ ಲಭಿಸಲಿದೆ. 10 ಸುತ್ತುಗಳ ಬಳಿಕ ವೈಶಾಲಿ ಅವರು ಎಂಟು ಪಾಯಿಂಟ್ಸ್‌ ಸಂಗ್ರಹಿಸಿದ್ಧಾರೆ. ಉಕ್ರೇನ್‌ನ ಆನ್ನಾ ಮುಝಿಚೆಕ್ ಅವರು ಏಳೂವರೆ ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಚೆನ್ನೈನ ಆಟಗಾರ್ತಿ ಕೊನೆಯ ಸುತ್ತಿನಲ್ಲಿ ಮಂಗೋಲಿಯದ ಬಕ್ತುಯಾಗ್‌ ಮುಂಗುತುವಾಲ್‌ ಅವರನ್ನು ಎದುರಿಸುವರು. ವಿದಿತ್‌ಗೆ ಜಂಟಿ ಮುನ್ನಡೆ: ಓಪನ್ ವಿಭಾಗದಲ್ಲಿ ಗ್ರ್ಯಾಂಡ್‌ಮಾಸ್ಟರ್‌ ವಿದಿತ್‌ ಗುಜರಾತಿ ಅವರು ರುಮೇನಿಯಾದ ಬೊಗ್ದಾನ್ ಡೇನಿಯಲ್ ಡೆಕ್ ವಿರುದ್ಧ ಗೆದ್ದು ಜಂಟಿ ಮುನ್ನಡೆಯಲ್ಲಿದ್ದಾರೆ. ನಾಲ್ಕನೇ ಗೆಲುವು ಸಾಧಿಸಿದ ಅವರು ಒಟ್ಟು 7.5 ಪಾಯಿಂಟ್ಸ್ ಹೊಂದಿದ್ದು, ಅಮೆರಿಕದ ಹಿಕಾರು ನಕಾಮುರಾ ಹಾಗೂ ರಷ್ಯಾದ ಆ್ಯಂಡ್ರಿ ಇಸಿಪೆಂಕೊ ಜತೆ ಅಗ್ರಸ್ಥಾನ ಹಂಚಿಕೊಂಡಿದ್ಧಾರೆ. ಅರ್ಜುನ್‌ ಇರಿಗೇಶಿ (7 ಪಾಯಿಂಟ್ಸ್) ಅವರು 10ನೇ ಸುತ್ತಿನಲ್ಲಿ ಅಮೆರಿಕದ ಸ್ಯಾಮುಯೆಲ್ ಸೇವಿಯನ್ ವಿರುದ್ದ ಗೆದ್ದರು. ಜಂಟಿ ನಾಲ್ಕನೇ ಸ್ಥಾನದಲ್ಲಿರುವ ಅವರು ಅಂತಿಮ ಸುತ್ತಿನಲ್ಲಿ ನಕಾಮುರಾ ಎದುರು ಆಡಲಿದ್ಧಾರೆ. ಆರ್‌.ಪ್ರಜ್ಞಾನಂದ (6 ಪಾಯಿಂಟ್ಸ್) ಅವರು ಉಕ್ರೇನ್‌ನ ಆ್ಯಂಟೊನ್ ಕೊರೊಬೊವ್ ಅವರೊಂದಿಗೆ ಡ್ರಾ ಮಾಡಿಕೊಂಡರು. ಭಾರತದ ಇತರ ಸ್ಪರ್ಧಿಗಳಾದ ಪಿ.ಹರಿಕೃಷ್ಣ, ಅರವಿಂದ ಚಿದಂಬರಂ ಮತ್ತು ಎಸ್‌.ಎಲ್‌.ನಾರಾಯಣನ್‌ (ಎಲ್ಲರೂ ತಲಾ 5.5 ಪಾಯಿಂಟ್ಸ್) ಅವರು ತಮ್ಮ ಎದುರಾಳಿಗಳ ಜತೆ ಡ್ರಾ ಮಾಡಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.