ರಾಷ್ಟ್ರೀಯ ಕ್ರೀಡಾಕೂಟದ ಈಜು: ಮಾನವಿ ವರ್ಮಾ ಕೂಟ ದಾಖಲೆ ಬೆಂಗಳೂರು: ಕರ್ನಾಟಕದ ಮಾನವಿ ವರ್ಮಾ ಅವರು ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆಯ ಮಹಿಳೆಯರ 200 ಮೀ. ಮೆಡ್ಲೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡರು. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಮಾನವಿ 2 ನಿ. 24.21 ಸೆ.ಗಳಲ್ಲಿ ಗುರಿ ತಲುಪಿದರು. ಮಧ್ಯಪ್ರದೇಶದ ರಿಚಾ ಮಿಶ್ರಾ (2 ನಿ. 25.78 ಸೆ.) ಅವರು 2015 ರಲ್ಲಿ ಸ್ಥಾಪಿಸಿದ್ದ ದಾಖಲೆ ಮುರಿದರು. ರಾಜ್ಯದ ಹಷಿಕಾ ರಾಮಚಂದ್ರ ಅವರು (2 ನಿ. 28.31 ಸೆ.) ಈ ಸ್ಪರ್ಧೆಯ ಕಂಚು ತಮ್ಮದಾಗಿಸಿಕೊಂಡರು. ಬೆಳ್ಳಿ ಪದಕ ಗೋವಾದ ಶೃಂಗಿ ರಾಜೇಶ್ ಬಾಂಡೇಕರ್ (2 ನಿ. 26.90 ಸೆ.) ಪಾಲಾಯಿತು. ಪುರುಷರ ವಿಭಾಗದಲ್ಲಿ ಪದಕ ಬೇಟೆ ಮುಂದುವರಿಸಿದ ಶ್ರೀಹರಿ ನಟರಾಜ್, 50 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ 25.77 ಸೆಕೆಂಡುಗಳೊಂದಿಗೆ ಅಗ್ರಸ್ಥಾನ ಪಡೆದರು. ರಿಧಿಮಾ ವೀರೇಂದ್ರ ಕುಮಾರ್‌ ಅವರು ಮಹಿಳೆಯರ 50 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯನ್ನು 30.21 ಸೆ.ಗಳಲ್ಲಿ ಕ್ರಮಿಸಿ ಚಿನ್ನ ಜಯಿಸಿದರು. ರಿಲೇ ತಂಡ ಕೂಟ ದಾಖಲೆ: 4X100 ಮೀ. ಮಿಶ್ರ ರಿಲೇ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಚಿನ್ನ ಜಯಿಸಿತು. ಅನೀಶ್‌ ಎಸ್‌.ಗೌಡ, ಧೀನಿಧಿ ದೇಸಿಂಗು, ನೀನಾ ವೆಂಕಟೇಶ್ ಮತ್ತು ಶ್ರೀಹರಿ ನಟರಾಜ್‌ ಅವರಿದ್ದ ತಂಡ 3 ನಿ.38.24 ಸೆ.ಗಳಲ್ಲಿ ಗುರಿ ತಲುಪಿ, ತನ್ನದೇ ಹೆಸರಿನಲ್ಲಿದ್ದ ಕೂಟ ದಾಖಲೆ ಉತ್ತಮಪಡಿಸಿಕೊಂಡಿತು. ಮಹಾರಾಷ್ಟ್ರ ಮತ್ತು ದೆಹಲಿ ತಂಡಗಳು ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದವು. ಪುರುಷರ 200 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ಶಾನ್‌ ಗಂಗೂಲಿ (2 ನಿ. 5.68 ಸೆ.) ಮತ್ತು ಎಸ್‌.ಶಿವ (2 ನಿ. 5.96 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ತಮ್ಮದಾಗಿಸಿದರು. ಈ ವಿಭಾಗದ ಚಿನ್ನದ ಪದಕವನ್ನು ಕೇರಳದ ಸಜನ್‌ ಪ್ರಕಾಶ್‌ (2 ನಿ. 4.57 ಸೆ.) ಕೂಟ ದಾಖಲೆಯೊಂದಿಗೆ ಗೆದ್ದರು. ಶಿರಿನ್‌ ಮತ್ತು ಅನೀಶ್‌ ಎಸ್‌.ಗೌಡ ಅವರು ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ 400 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಕಂಚು ಜಯಿಸಿದರು. - - ಟೆನಿಸ್‌: ಫೈನಲ್‌ಗೆ ಆದಿಲ್‌–ಪ್ರಜ್ವಲ್‌ ಕರ್ನಾಟಕದ ಆದಿಲ್‌ ಕಲ್ಯಾಣಪುರ್‌ ಮತ್ತು ಎಸ್‌.ಡಿ.ಪ್ರಜ್ವಲ್‌ ದೇವ್‌ ಜೋಡಿ ಟೆನಿಸ್‌ನಲ್ಲಿ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ ಪ್ರವೇಶಿಸಿತು. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಆದಿಲ್‌–ಪ್ರಜ್ವಲ್‌ 6–0 6–1 ರಿಂದ ಉತ್ತರ ಪ್ರದೇಶದ ಸಿದ್ಧಾರ್ಥ್‌ ರಾವತ್– ಸಿದ್ದಾರ್ಥ್‌ ವಿಶ್ವಕರ್ಮ ಅವರನ್ನು ಮಣಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಪ್ರಜ್ವಲ್‌– ಶರ್ಮದಾ ಬಾಲು ಜೋಡಿ 7–5 6–7 6–10 ರಿಂದ ತಮಿಳುನಾಡಿನ ಸಾಯಿ ಸಂಹಿತಾ– ಜೀವನ್‌ ಎನ್‌. ಎದುರು ಪರಾಭವಗೊಂಡಿತು. ಮಹಿಳೆಯರ ಡಬಲ್ಸ್‌ನಲ್ಲಿ ಶರ್ಮದಾ ಬಾಲು– ಸೋಹಾ ಸಾದಿಕ್‌ ಜೋಡಿ 4–6 7–6 5–10 ರಿಂದ ತೆಲಂಗಾಣದ ಬಿ.ರಷ್ಮಿಕಾ– ಸಿ.ಶ್ರಾವ್ಯ ಶಿವಾನಿ ಕೈಯಲ್ಲಿ ಸೋತಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.