ಫಿಡೆ ಗ್ರ್ಯಾಂಡ್‌ ಸ್ವಿಸ್‌ ಚೆಸ್: ಸ್ಟೆಫಾನೊವಾ ವಿರುದ್ಧ ಗೆದ್ದ ವೈಶಾಲಿ ಮುನ್ನಡೆ ಐಲ್‌ ಆಫ್‌ ಮ್ಯಾನ್: ಮಾಜಿ ವಿಶ್ವ ಮಹಿಳಾ ಚಾಂಪಿಯನ್ ಅಂಟೊನೇಟಾ ಸೆಫಾನೊವಾ ಅವರನ್ನು ಸೋಲಿಸಿದ ಭಾರತದ ಆರ್‌.ವೈಶಾಲಿ, ಫಿಡೆ ಗ್ರ್ಯಾಂಡ್‌ ಸ್ವಿಸ್‌ ಚೆಸ್‌ ಟೂರ್ನಿಯ ಮಹಿಳಾ ವಿಭಾಗದಲ್ಲಿ ಒಂಬತ್ತನೇ ಸುತ್ತಿನ ನಂತರ ಒಂಟಿಯಾಗಿ ಅಗ್ರಸ್ಥಾನಕ್ಕೇರಿದರು. ಚೆನ್ನೈನ ಅವರು ಗ್ರ್ಯಾಂಡ್‌ಮಾಸ್ಟರ್‌ ಪಟ್ಟಕ್ಕೆ ಇನ್ನಷ್ಟು ಹತ್ತಿರವಾದರು. ಅತ್ಯುನ್ನತ ಮಟ್ಟದಲ್ಲಿ ಆಡುತ್ತಿರುವ ವೈಶಾಲಿ, ಮಹತ್ವದ್ದೇನೂ ಅಲ್ಲದ ನಾಲ್ಕನೇ ಜಿಎಂ ನಾರ್ಮ್ ಕೂಡ ಪಡೆದರು. ಅವರಿಗೆ ಗ್ರ್ಯಾಂಡ್‌ಮಾಸ್ಟರ್‌ ಪಟ್ಟಕ್ಕೆ ಇನ್ನು ಏಳು ರೇಟಿಂಗ್‌ ಪಾಯಿಂಟ್‌ ಅಷ್ಟೇ ಬೇಕಾಗಿದೆ. ಭಾರತದಲ್ಲಿ ಇದುವರೆಗೆ ಇಬ್ಬರು ಆಟಗಾರ್ತಿಯರು ಮಾತ್ರ (ಕೋನೇರು ಹಂಪಿ ಮತ್ತು ದ್ರೋಣವಲ್ಲಿ ಹಾರಿಕಾ) ಗ್ರ್ಯಾಂಡ್‌ಮಾಸ್ಟರ್ ಬಿರುದು ಪಡೆದಿದ್ದಾರೆ. ಪ್ರಜ್ಞಾನಂದ ಅವರ ಅಕ್ಕ ವೈಶಾಲಿ ಈಗ ಟೂರ್ನಿಯಲ್ಲಿ ಏಳು ಪಾಯಿಂಟ್ಸ್‌ ಗಳಿಸಿದ್ದಾರೆ. ಅವರು ಹತ್ತನೇ ಸುತ್ತಿನಲ್ಲಿ ಮೊದಲ ಬೋರ್ಡ್‌ನಲ್ಲಿ ಚೀನಾದ ಝೊಂಗ್‌ಯಿ ತಾನ್ ಅವರನ್ನು ಎದುರಿಸಲಿದ್ದಾರೆ. ರಷ್ಯಾದ ಲೆವಾ ಗರಿಫುಲಿನಾ (6) ಎರಡನೇ ಬೋರ್ಡ್‌ನಲ್ಲಿ ಉಕ್ರೇನ್‌ನ ಆನ್ನಾ ಮುಝಿಚೆಕ್ ಜೊತೆ ಡ್ರಾ ಮಾಡಿಕೊಂಡರು. ಫ್ರಾನ್ಸ್‌ನ ಸೋಫಿ ಮಿಲೆಟ್‌ (5.5) ಇನ್ನೊಂದು ಪಂದ್ಯದಲ್ಲಿ ಚೀನಾದ ತಾನ್ ಝೊಂಗ್‌ಇ (ಚೀನಾ, 6.5) ಅವರಿಗೆ ಮಣಿದರು. ವಿದಿತ್‌ಗೆ ಜಂಟಿ ಮುನ್ನಡೆ: ಓಪನ್ ವಿಭಾಗದಲ್ಲಿ ಗ್ರ್ಯಾಂಡ್‌ಮಾಸ್ಟರ್‌ ವಿದಿತ್‌ ಗುಜರಾತಿ ಎರಡನೇ ಬೋರ್ಡ್‌ನಲ್ಲಿ ಆ್ಯಂಡ್ರಿ ಇಸಿಪೆಂಕೊ ಅವರ ಜೊತೆ ಡ್ರಾ ಆಡಿದರು. ಅವರು 6.5 ಪಾಯಿಂಟ್ಸ್‌ ಸಂಗ್ರಹಿಸಿದ್ದು ಇತರ ಐದು ಮಂದಿ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಅವರು ಹತ್ತನೇ ಸುತ್ತಿನಲ್ಲಿ ಬೊಗ್ದಾನ್ ಡೇನಿಯಲ್ ಡೆಕ್ ಅವರನ್ನು ಎದುರಿಸಲಿದ್ದಾರೆ. ಅಗ್ರಸ್ಥಾನಕ್ಕೆ ರೇಸ್‌ ಪೈಪೋಟಿಯಿಂದ ಕೂಡಿದ್ದು, ಅಮೆರಿಕದ ಅನುಭವಿಗಳಾದ ಫ್ಯಾಬಿಯಾನೊ ಕರುವಾನ, ಹಿಕಾರು ನಕಾಮುರಾ, ರುಮೇನಿಯಾದ ಡೇನಿಯಲ್ ಡೆಕ್‌, ಇರಾನ್‌ನ ಪರ್ಹಾಮ್ ಮಘಸೂಡ್ಲೂ ಮತ್ತು ರಷ್ಯಾದ ಆ್ಯಂಡ್ರಿ ಇಸಿಪೆಂಕೊ ಕೂಡ ಆರೂವರೆ ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಭಾರತದ ಅರ್ಜುನ್ ಇರಿಗೇಶಿ ಸೇರಿದಂತೆ ಆರು ಆಟಗಾರರು ತಲಾ ಆರು ಪಾಯಿಂಟ್ಸ್ ಸಂಗ್ರಹಿಸಿದ್ದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಅರ್ಜುನ್ ಒಂಬತ್ತನೇ ಸುತ್ತಿನಲ್ಲಿ ಸ್ಲೊವೇನಿಯಾದ ವ್ಲಾದಿಮಿರ್‌ ಫೆಡೊಸೀವ್ (6) ಜೊತೆ ಡ್ರಾ ಮಾಡಿಕೊಂಡರು. ಭಾರತದ ಇನ್ನೊಬ್ಬ ಜಿಎಂ ನಿಹಾಲ್ ಸರಿನ್ ಅವರ ಯಶಸ್ಸಿನ ಓಟಕ್ಕೆ ಅಡ್ಡಿಯಾಯಿತು. ಅವರು 9ನೇ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಅವರಿಗೆ ಮಣಿದರು. ಪ್ರಜ್ಞಾನಂದ ಅವರು ಟೂರ್ನಿಯಲ್ಲಿ ಸತತ ಎರಡನೇ ಗೆಲುವನ್ನು ದಾಖಲಿಸಿದರು. ಅವರು ರಿನತ್ ಜುಮಬಯೇವ್ (ಕಜನಕಸ್ತಾನ) ವಿರುದ್ಧ ಜಯಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.