ನ.24 ರಿಂದ ಡ್ರ್ಯಾಗ್‌ ರೇಸ್‌ ಬೆಂಗಳೂರು: ವ್ರೂಮ್ ಮೋಟರ್‌ ಸ್ಪೋರ್ಟ್ಸ್‌ ಆಶ್ರಯದಲ್ಲಿ ನವೆಂಬರ್‌ 24 ರಿಂದ 26ರವರೆಗೆ 9ನೇ ಆವೃತ್ತಿಯ ಡ್ರ್ಯಾಗ್‌ಮೀಟ್‌ (ರೇಸ್‌) ಸ್ಪರ್ಧೆಗಳು ಹೊಸೂರಿನ ತನೇಜಾ ಏರೋಸ್ಪೇಸ್‌ ಆ್ಯಂಡ್‌ ಏವಿಯೇಷನ್‌ ಟ್ರ್ಯಾಕ್‌ನಲ್ಲಿ ನಡೆಯಲಿದೆ. 402 ಮೀಟರ್‌ ರೇಸ್‌ ಟ್ರ್ಯಾಕ್‌ನಲ್ಲಿ ನಡೆಯಲಿರುವ ಈ ರೇಸ್‌, ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಿಭಾಗದಲ್ಲಿ ನಡೆಯಲಿದ್ದು, ಸೂಪರ್‌ ಕಾರ್, ಸೂಪರ್‌ ಬೈಕ್‌ಗಳ ವೇಗ, ಕಸರತ್ತು ಪ್ರದರ್ಶನ ಮೈನವಿರೇಳಿಸುವ ರೋಮಾಂಚಕ ಅನುಭವ ನೀಡಲಿದೆ ಎಂದು ವ್ರೂಮ್‌ ಮೋಟರ್‌ ಸ್ಪೋರ್ಟ್ಸ್‌ ಆಡಳಿತ ನಿರ್ದೇಶಕ ತಾರಿಖ್ ಮೊಹ್ಸಿನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನವೆಂಬರ್‌ 24ರಂದು ವಾಹನಗಳ ತಪಾಸಣೆ ನಡೆಯಲಿದ್ದು, 25 ಮತ್ತು 26ರಂದು ಸ್ಪರ್ಧೆಗಳು ನಡೆಯಲಿವೆ. ಈ ಬಾರಿ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ ಪ್ರಧಾನ ಪ್ರಾಯೋಜಕತ್ವ ಹೊಂದಿದೆ. ಜೊತೆಗೆ ಹೀರೊ ಮೋಟರ್ಸ್‌, ಅಲ್ಟ್ರಾವಾಯ್ಲೆಟ್‌, ಸ್ಪೀಡ್‌ವೇ ಮೋಟರ್‌ಸ್ಪೋರ್ಟ್ಸ್‌, ಫೆಡರೇಷನ್‌ ಮೋಟರ್‌ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಇಂಡಿಯಾ ಸಹಭಾಗಿತ್ವ ಹೊಂದಿವೆ ಎಂದರು. ‘ಕಳೆದ ಫೆಬ್ರುವರಿಯಲ್ಲಿ ನಡೆದ ಎಂಟನೇ ಆವೃತ್ತಿಯ ಸ್ಪರ್ಧೆಗಳನ್ನು, ದೇಶದಲ್ಲೇ ಮೊದಲ ಬಾರಿ ಹೊನಲು ಬೆಳಕಿನಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. 650ಕ್ಕೂ ಹೆಚ್ಚು ವಾಹನಗಳು ಪಾಲ್ಗೊಂಡಿದ್ದವು’ ಎಂದರು. ನವೆಂಬರ್‌ 2 ರಿಂದ ನೋಂದಣಿ ಸ್ವೀಕಾರ ಆರಂಭಿಸಲಾಗಿದ್ದು ಇದುವರೆಗೆ 100ಕ್ಕೂ ಹೆಚ್ಚು ಮಂದಿ ನೋಂದಾಯಿಸಿದ್ದಾರೆ. ದೇಶದ ನಾನಾ ಭಾಗಗಳಿಂದ ಇವರು ಭಾಗವಹಿಸಲಿದ್ದಾರೆ. ಡ್ರ್ಯಾಗ್‌ ರೇಸ್‌ನಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರೋತ್ಸಾಹಿಸಲು ಅವರಿಗೆ ಪ್ರವೇಶಶುಲ್ಕ ಇರುವುದಿಲ್ಲ ಎಂದರು. ಇದೇ ಮೊದಲ ಬಾರಿಗೆ ಇ.ವಿ. ಸ್ಕೂಟರ್‌ ಮತ್ತು ಇ.ವಿ. ಮೋಟರ್‌ ಸೈಕಲ್ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಪರಿಚಯಿಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿಡ್ರ್ಯಾಗ್‌ ರೇಸ್‌ಗೆ ಸಂಬಂಧಿಸಿದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.