ರಾಜಧಾನಿಯಲ್ಲಿ ಮೊದಲ ಕಂಬಳಕ್ಕೆ ಸರ್ವಸಿದ್ಧತೆ: 200 ಜೋಡಿ ಕೋಣಗಳು ಭಾಗಿ ಬೆಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ರಾಜ್ಯದ ರಾಜಧಾನಿಯಲ್ಲಿ ಇದೇ ಮೊದಲ ಬಾರಿ ನಡೆಸಲು ಅಂತಿಮ ಸಿದ್ಧತೆಗಳು ಭರದಿಂದ ನಡೆದಿವೆ. ಅರಮನೆ ಮೈದಾನದಲ್ಲಿ ಇದೇ 25 ಮತ್ತು 26ರಂದು ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಹೆಸರಿನಡಿ ನಡೆಯುವ ಕಂಬಳದಲ್ಲಿ 200 ಜೊತೆ ಕೋಣಗಳು ಭಾಗವಹಿಸಲಿವೆ. ‘ಕಂಬಳಕ್ಕೆ ಪ್ರವೇಶ ಕೋರಿ 228 ಜೋಡಿಗಳು ನೋಂದಾಯಿಸಿದ್ದವು. ನಾವು 200 ಜೋಡಿಗೆ ಇಳಿಸಿದ್ದೇವೆ. ಸಾಮಾನ್ಯವಾಗಿ ಕಂಬಳ ನಡೆಯುವ ‘ಕರೆ’ (ಕೋಣಗಳು ಓಡುವ ಟ್ರ್ಯಾಕ್‌) 147 ಮೀ. ಇದ್ದರೆ ಇಲ್ಲಿ 155 ಮೀ.ವರೆಗೆ ಮಾಡಿದ್ದೇವೆ. ಇದು ಅತ್ಯುತ್ತಮ ಮಟ್ಟದಲ್ಲಿ ನಿರ್ಮಾಣವಾಗಿದೆ’ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು. ‘ನಿಯಮದಂತೆ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪಶುಸಂಗೋಪನಾ ಇಲಾಖೆ ಅಧಿಕಾರಿಗಳೂ ಇರುತ್ತಾರೆ. 23ರಂದು (ಗುರುವಾರ) ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ಕೋಣಗಳು ಒಟ್ಟಿಗೆ ಲಾರಿಗಳಲ್ಲಿ ಹೊರಡಲಿವೆ. ಸಂಜೆ 4 ಗಂಟೆಗೆ ಹಾಸನ ತಲುಪಲಿವೆ. ಅಲ್ಲಿ ಅವುಗಳನ್ನು ಇಳಿಸಿ ಕೆಲಹೊತ್ತು ವಿಶ್ರಾಂತಿ ನೀಡಿ ತಿನಿಸು ನೀಡಲಾಗುವುದು. ಅಲ್ಲಿನ ವ್ಯವಸ್ಥೆಯನ್ನು ಶಾಸಕ ಎಚ್‌.ಡಿ.ರೇವಣ್ಣ ಅವರು ನೋಡಿಕೊಳ್ಳಲಿದ್ದಾರೆ. ಅಲ್ಲಿಂದ ಹೊರಡುವ ಕಂಬಳದ ಕೋಣಗಳು ರಾತ್ರಿ ಬೆಂಗಳೂರು ತಲುಪಲಿವೆ. ಸುಮಾರು 5000 ಮಂದಿ ಈ ಪ್ರಯಾಣದಲ್ಲಿ ಭಾಗಿಯಾಗುವರು’ ಎಂದು ಅವರು ವಿವರ ನೀಡಿದರು. ‘ಕಂಬಳಕ್ಕೆ₹7.50 ಕೋಟಿಯಿಂದ ₹8 ಕೋಟಿ ವೆಚ್ಚ ತಗಲುವ ನಿರೀಕ್ಷೆಯಿದೆ. ಸರ್ಕಾರ ಒಂದು ಕೋಟಿ ಅನುದಾನ ಪ್ರಕಟಿಸಿದೆ. ಪ್ರೆಸ್ಟೀಜ್‌ ಡೆವಲಪರ್ಸ್‌, ಆಭರಣ ಜುವೆಲರ್ಸ್‌, ಕೆನರಾ ಬ್ಯಾಂಕ್‌, ಗೋಲ್ಡ್‌ಫಿಂಚ್ ಸಮೂಹ, ಎಂಆರ್‌ಜಿ ಸಮೂಹ ಮತ್ತಿತರರ ಉದ್ಯಮಗಳು ಹಣಕಾಸು ನೆರವು ನೀಡುತ್ತಿವೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘವೂ ಕೈಜೋಡಿಸಿದೆ ಎಂದರು. ‌ಒಂದೇ ಸಮಾಜಕ್ಕೆ ಸೀಮಿತವಾಗಿಲ್ಲ ಬೆಂಗಳೂರು ಕಂಬಳವು ಯಾವುದೇ ಒಂದು ಪಕ್ಷ ಅಥವಾ ಸಮಾಜಕ್ಕೆ ಸೀಮಿತಗೊಂಡಿಲ್ಲ. ಇದು ಎಲ್ಲರನ್ನೂ ಒಳಗೊಂಡಿದೆ. ಕಂಬಳದಲ್ಲಿ ಆರು ಜೋಡಿ ಕೋಣಗಳನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ ಯಜಮಾನರು ತರಲಿದ್ದಾರೆ. ನಾಲ್ಕು ಜೋಡಿ ಕೋಣಗಳನ್ನು ಕ್ರಿಶ್ಚಿಯನ್ ಸಮುದಾಯದವರು ತರಲಿದ್ದಾರೆ. ಸ್ಪರ್ಧೆಗೆ ಕೋಣಗಳನ್ನು ತರುವ ಎಲ್ಲ ‘ಯಜಮಾನರಿಗೆ’ ಲಾರಿ ಬಾಡಿಗೆಯಾಗಿ ತಲಾ ₹50,000 ನೀಡಲಾಗುವುದು. ಅವುಗಳಿಗೆ ಹುರುಳಿ ಮತ್ತು ಒಣಹುಲ್ಲನ್ನು ಅವುಗಳ ಮಾಲೀಕರೇ ತರುತ್ತಾರೆ ಎಂದು ಅಶೋಕ್ ವಿವರಿಸಿದರು. ಅವುಗಳಿಗೆ ಕುಡಿಯುವ ನೀರನ್ನೂ ಅಲ್ಲಿಂದಲೇ ತರಲಾಗುತ್ತಿದೆ. ‘ಕಾಂತಾರ ಸಿನಿಮಾದಲ್ಲಿ ಕಂಬಳದ ದೃಶ್ಯಗಳನ್ನು ತೋರಿಸಿದ ಮೇಲೆ ಅದರ ಬಗ್ಗೆ ರಾಜ್ಯ, ದೇಶದಲ್ಲಿ ಕುತೂಹಲ ಹೆಚ್ಚಿದೆ. ಈಗ ಅದನ್ನು ನೇರವಾಗಿ ನೋಡುವ ಅವಕಾಶ ರಾಜಧಾನಿಯ ಜನರಿಗೆ ಒದಗಿದೆ’ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು. ‘ರಾಜ್ಯದ ಚಿತ್ರರಂಗದ ನಟ–ನಟಿಯರನ್ನು ಆಹ್ವಾನಿಸಿದ್ದೇವೆ. ಬಾಲಿವುಡ್‌ ನಟಿ ಅನುಷ್ಕಾ ಶೆಟ್ಟಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ’ ಎಂದರು. 24ರಂದು (ಶುಕ್ರವಾರ) ಬೆಳಿಗ್ಗೆಯಿಂದ ಸಂಜೆಯವರೆಗೆ ತುಳು ಕೂಟದಿಂದ ವೈವಿಧ್ಯಕಾರ್ಯಕ್ರಮಗಳು ನಡೆಯಲಿವೆ. ಗಿಫ್ಟ್‌ ಕೂಪನ್: ಕಂಬಳಕ್ಕೆ ಬರುವ ಎಲ್ಲರಿಗೂ ಕೂಪನ್ ನೀಡಲಾಗುವುದು. ಅದೃಷ್ಟಶಾಲಿಗಳಿಗೆ ಮೊದಲ ಬಹುಮಾನವಾಗಿ ಕಾರು, ಎರಡನೇ ಬಹುಮಾನವಾಗಿ ಬುಲೆಟ್‌ ಬೈಕ್ ಮತ್ತು ಮೂರನೇ ಬಹುಮಾನವಾಗಿ ಎಲೆಕ್ಟ್ರಿಕ್‌ ಸ್ಕೂಟರ್‌ ನೀಡಲಾಗುವುದು ಎಂದು ಇದರ ಪ್ರಾಯೋಜಕತ್ವ ವಹಿಸಿರುವ ಉದ್ಯಮಿ ಹಾಗೂ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ತಿಳಿಸಿದರು. ಕಂಬಳ ಸ್ಪರ್ಧೆಯಲ್ಲಿ ವಿಜೇತರಾಗುವ ಕೋಣದ ಯಜಮಾನರಿಗೆ ಒಂದು ಲಕ್ಷ ನಗದು, 16 ಗ್ರಾಂ ಚಿನ್ನ ನೀಡಲಾಗುತ್ತದೆ. ಎರಡನೇ ಸ್ಥಾನ ಪಡೆದವರಿಗೆ 50,000 ನಗದು, ಎಂಟು ಗ್ರಾಂ ಚಿನ್ನ ಹಾಗೂ ಮೂರನೇ ಸ್ಥಾನ ಪಡೆದವರಿಗೆ 25,000 ನಗದು ಬಹುಮಾನ ನೀಡಲಾಗುವುದು ಎಂದರು. ಇದು ಅವರು ಮಾಡುವ ವೆಚ್ಚಕ್ಕಿಂತ ಕಡಿಮೆ. ಆದರೆ ಗೆಲ್ಲುವುದು ಕೋಣಗಳ ಯಜಮಾನರಿಗೆ ಪ್ರತಿಷ್ಠೆಯ ವಿಷಯ ಎಂದರು. ಬೆಂಗಳೂರು ಕಂಬಳದ ಮುಖ್ಯಾಂಶಗಳು * ಕಂಬಳ ‘ಕರೆ’ (ಟ್ರ್ಯಾಕ್‌)ಗೆ ‘ರಾಜ ಮಹಾರಾಜ’ ಹೆಸರು. * ಕಾರ್ಯಕ್ರಮದ ಮುಖ್ಯವೇದಿಕೆಗೆ ಪುನೀತ್ ರಾಜಕುಮಾರ್ ಹೆಸರು. ಸಾಂಸ್ಕೃತಿಕ ವೇದಿಕೆಗೆ ಕೃಷ್ಣರಾಜ ಒಡೆಯರ್ ಹೆಸರು. * ಸಾಂಸ್ಕೃತಿಕ ಕಾರ್ಯಕ್ರಮ. ಕರಾವಳಿಯ ಯಕ್ಷಗಾನ, ಹುಲಿವೇಷ ಕುಣಿತ * ಕಂಬಳಕ್ಕೆ ಪ್ರವೇಶ ಉಚಿತ * 180ಕ್ಕೂ ಹೆಚ್ಚು ಮಳಿಗೆಗಳು. ಹಲಸಿನ ಹಪ್ಪಳದಿಂದ ಕೋರಿ (ಕೋಳಿ)ರೊಟ್ಟಿಯವರೆಗೆ ಕರಾವಳಿಯ ಸಾಂಪ್ರದಾಯಿಕ ತಿನಿಸುಗಳು ಲಭ್ಯ, ವಸ್ತು ಪ್ರದರ್ಶನ * ಗ್ಯಾಲರಿಯಲ್ಲಿ 6 ರಿಂದ 7ಸಾವಿರ ಜನರು ಕುಳಿತುಕೊಳ್ಳಲು ಅವಕಾಶ * 24 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್‌ ವ್ಯವಸ್ಥೆ * 25ರಂದು ಬೆಳಿಗ್ಗೆ 10.30ಕ್ಕೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಂದ ಉದ್ಘಾಟನೆ ‘ವಿವಾದಿತರ ಹೆಸರನ್ನು ಕೈಬಿಟ್ಟಿದ್ದೇವೆ....’ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಪೀಡನೆ ಆರೋಪಿಯಾಗಿರುವ ಕುಸ್ತಿ ಸಂಸ್ಥೆ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ಆಹ್ವಾನಪತ್ರಿಕೆಯಲ್ಲಿ ಹೆಸರು ಸೇರಿಸಿದ್ದು ವಿವಾದವಾಗಿತ್ತು. ಅವರ ಹೆಸರನ್ನು ನಂತರ ತೆಗೆದುಹಾಕಲಾಗಿತ್ತು. ಅಪರಾಧ ಕೃತ್ಯಗಳ ಮೇಲೆ ಜೈಲುಶಿಕ್ಷೆ ಅನುಭವಿಸಿದ್ದ ಶ್ಯಾಮ್‌ಕಿಶೋರ್‌ ಗರಕಪಟ್ಟಿ ಅವರ ಹೆಸರೂ ಇತ್ತು. ನಮಗೆ ಗೊತ್ತಾದ ಮೇಲೆ ಅವರ ಹೆಸರನ್ನೂ ತೆಗೆದುಹಾಕಿ ಬರಬೇಡಿ ಎಂದಿದ್ದೇವೆ ಎಂದು ಅಶೋಕ್ ಕುಮಾರ್ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.