ಮಂಗಳೂರು ವಿವಿ ಅಂತರ ಕಾಲೇಜು ಕುಸ್ತಿ: ಚಿನ್ನಕ್ಕೆ ಮುತ್ತಿಟ್ಟ ಪ್ರಜ್ವಲ್‌, ಬಸವರಾಜ ಮಂಗಳೂರು: ಆಳ್ವಾಸ್ ಕಾಲೇಜಿನ ಬಸವರಾಜ್ ಎಚ್‌ ಮತ್ತು ಪ್ರಜ್ವಲ್ ಅವರು ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕುಸ್ತಿ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಕ್ರಮವಾಗಿ 97 ಮತ್ತು 92 ಕೆಜಿ ವಿಭಾಗದ ಚಿನ್ನ ತಮ್ಮದಾಗಿಸಿಕೊಂಡರು. ನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಬಿ.ದೇವದಾಸ್ ಕಲಾ ಮಂಟಪದಲ್ಲಿ ಬುಧವಾರ ಆರಂಭಗೊಂಡ ಚಾಂಪಿಯನ್‌ಷಿಪ್‌ನ ಲೀಗ್‌ ಪಂದ್ಯಗಳಲ್ಲಿ ಬಸವರಾಜ್ ಮತ್ತು ಪ್ರಜ್ವಲ್ ಆಧಿಪತ್ಯ ಮೆರೆದರು. ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಎದುರಾಳಿಯನ್ನು ‘ಚಿತ್’ ಮಾಡಿದ ಬಸವರಾಜ್ ಒಂದರಲ್ಲಿ ತಾಂತ್ರಿಕ ಮೇಲುಗೈ ಸಾಧಿಸಿದರು. ಒಟ್ಟು 19 ಪಾಯಿಂಟ್‌ಗಳು ಅವರ ಪಾಲಾದವು. ಪ್ರಜ್ವಲ್ ನಾಲ್ವರನ್ನು ಮಣಿಸಿ 15 ಪಾಯಿಂಟ್ ಕಲೆ ಹಾಕಿದರು. 97 ಕೆಜಿ ವಿಭಾಗದ ಬೆಳ್ಳಿ ಪದಕ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ರಕ್ಷಿತ್ ಪಾಲಾಯಿತು. ಡಾ.ಬಿ.ಬಿ ಹೆಗಡೆ ಕಾಲೇಜಿನ ಆರ್ಯ ಕಂಚಿನ ಪದಕ ಗಳಿಸಿದರು. ಮಿಲಾಗ್ರಿಸ್ ಕಾಲೇಜಿನ ರಂಜಿತ್ ಮತ್ತು ಕುಂದಾಪುರದ ಬಿ.ಸಿ.ಕಾಲೇಜಿನ ವಿನಯ್ 92 ಕೆಜಿ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಕೊರಳಿಗೇರಿಸಿಕೊಂಡರು. ಉದ್ಘಾಟನೆ: ಎ.ಸಿ.ಎಂ.ಇ ಬಿಲ್ಡಿಂಗ್ ಮೆಟೀರಿಯಲ್ಸ್ ಟ್ರೇಡಿಂಗ್‌ನ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಶೇರಿಗಾರ್ ಚಾಂಪಿಯನ್‌ಷಿಪ್‌ಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ಗಳ ದಾಸರಾಗದೆ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಕಾಲೇಜಿನ ಸಂಚಾಲಕ ವಸಂತ ಕಾರಂದೂರು ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ದೇವಸ್ಥಾನದ ಆಡಳಿತ ಸಮಿತಿ ಖಜಾಂಚಿ ಪದ್ಮರಾಜ್ ಆರ್ ಮುಖ್ಯ ಅತಿಥಿಯಾಗಿದ್ದರು. ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜಾ, ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಮಾಜಿ ನಿರ್ದೇಶಕರಾದ ಪುರುಷೋತ್ತಮ್ ಪೂಜಾರಿ, ಬಿ.ಜಿ. ಸುವರ್ಣ, ಉಮ್ಮಪ್ಪ ಪೂಜಾರಿ ಇದ್ದರು. ಪ್ರಾಂಶುಪಾಲೆ ಆಶಾಲತಾ ಎಸ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಜಯಪ್ರಕಾಶ್ ವಂದಿಸಿದರು. ವಾಣಿಜ್ಯ ವಿಜ್ಞಾನ ವಿಭಾಗದ ಉಪನ್ಯಾಸಕಿ ಆಶಿತ ನಿರೂಪಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.