ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ನವೆಂಬರ್ 25ರಿಂದ ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರವು (ಎನ್‌ಎಸಿ) ನವೆಂಬರ್ 25 ಹಾಗೂ 26ರಂದು ‘ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್’ ಆಯೋಜಿಸಲಿದೆ. ಸತತ ಎರಡನೇ ವರ್ಷ ಆಯೋಜನೆಗೊಳ್ಳುತ್ತಿರುವ ಸ್ಪರ್ಧೆ ಇದಾಗಿದೆ. ಪದ್ಮನಾಭ ನಗರದಲ್ಲಿರುವ ಎನ್‌ಎಸಿ ಈಜುಕೊಳದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಬೇರೆ ಬೇರೆ ರಾಜ್ಯಗಳ 250 ಈಜುಪಟುಗಳು ಭಾಗವಹಿಸಲಿದ್ದಾರೆ. ಅದರಲ್ಲಿ 153 ಪುರುಷರು ಮತ್ತು 97 ಮಹಿಳೆಯರು ಸ್ಪರ್ಧಿಸಲಿದ್ದಾರೆ. ಹೋದವರ್ಷ ನಡೆದಿದ್ದ ಸ್ಕಿನ್ಸ್‌ ವಿಭಾಗದ ಸ್ಪರ್ಧೆಗಳು ಈ ಸಲವೂ ಆಯೋಜನೆಗೊಂಡಿವೆ. ‘ಈಜುಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ನಗರದಲ್ಲಿ 2012ರಲ್ಲಿ ಎನ್‌ಎಸಿ ಆರಂಭಿಸಲಾಗಿದೆ. ಹೋದ ವರ್ಷ ಈಜು ಕೇಂದ್ರದ ದಶಮಾನೋತ್ಸವ ಆಚರಣೆ ಅಂಗವಾಗಿ ಕೂಟ ಆಯೋಜಿಸಲಾಗಿತ್ತು. ಉತ್ತಮ ಸಂಖ್ಯೆಯಲ್ಲಿ ಸ್ಪರ್ಧೆಗಳು ಭಾಗವಹಿಸಿದ್ದರು. ಈ ಬಾರಿಯೂ ಕರ್ನಾಟಕದ ನೂರಕ್ಕೂ ಹೆಚ್ಚು ಸ್ಪರ್ಧಿಗಳು ಇದ್ದಾರೆ. ಕೇರಳ, ತಮಿಳುನಾಡು, ಹರಿಯಾಣ, ಗುಜರಾತ್‌, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ ಈಜುಪಟುಗಳು ಭಾಗವಹಿಸಲಿದ್ದಾರೆ’ ಎಂದು ಕೇಂದ್ರದ ಮುಖ್ಯಸ್ಥ ಡಾ.ವರುಣ್‌ ನಿಜಾವನ್‌ ತಿಳಿಸಿದ್ದಾರೆ. ‘ಇಂತಹ ದೊಡ್ಡಮಟ್ಟದ ಕೂಟವನ್ನು ಎರಡನೇ ವರ್ಷವೂ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ.ಈಜು ಕ್ರೀಡೆಯನ್ನು ಹೊಸ ದಿಶೆಯನ್ನು ತೋರುವುದು ನಮ್ಮ ಉದ್ದೇಶ. ಈ ಚಾಂಪಿಯನ್‌ಷಿಪ್‌ ₹ 10 ಲಕ್ಷ ಬಹುಮಾನ ಮೊತ್ತ ಒಳಗೊಂಡಿದೆ. ಈಜು ಕ್ರೀಡೆ ಮತ್ತು ಈಜುಪಟುಗಳಿಗೆ ಉತ್ತಮ ಪ್ರೋತ್ಸಾಹ ನೀಡುವುದು ನಮ್ಮ ಧ್ಯೇಯ’ ಎಂದರು. ಒಲಿಂಪಿಯನ್ ಶ್ರೀಹರಿ ನಟರಾಜನ್, ಸಜನ್ ಪ್ರಕಾಶ್, ಶಿವ ಶ್ರೀಧರ್, ರಿಧಿಮಾ ವೀರೇಂದ್ರಕುಮಾರ್, ಎ.ಎಸ್. ಆನಂದ್, ನೀನಾ ವೆಂಕಟೇಶ್, ಎಸ್‌.ಪಿ. ಲಿಖಿತ್, ಹರ್ಷಿತಾ ಜಯರಾಮ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಈಜುಪಟುಗಳು ಸ್ಪರ್ಧಿಸುವರು. ಉದ್ಘಾಟನೆ ನಾಳೆ: ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆ, ಮುನಿರೆಡ್ಡಿ ಬಡಾವಣೆ, ಪದ್ಮನಾಭನಗರದಲ್ಲಿರುವ ಈಜುಕೇಂದ್ರದಲ್ಲಿ ನಡೆಯುವ ಕೂಟವನ್ನು ನ.25ರಂದು ಸಂಜೆ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಉದ್ಘಾಟಿಸಲಿದ್ದಾರೆ. ಈಜುಕೋಟದ ನೇರಪ್ರಸಾರ ವೀಕ್ಷಿಸಲು ಯೂಟ್ಯೂಬ್ ಲಿಂಕ್: ://.//yzEBk8rbV8Q?= ://.//zrpIDY0Sa5o?= ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.