ರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್‌ಷಿಪ್‌: ಅನಾಹತ್ ಸಿಂಗ್‌ಗೆ ಪ್ರಶಸ್ತಿ ಚೆನ್ನೈ: ಉದಯೋನ್ಮುಖ ಆಟಗಾರ್ತಿ ಅನಾಹತ್ ಸಿಂಗ್ ಅವರು ಇಲ್ಲಿ ಗುರುವಾರ ನಡೆದ ರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಫೈನಲ್‌ ಪಂದ್ಯದಲ್ಲಿ ಅವರು 9-11, 11-4 (ನಿವೃತ್ತ)ರಿಂದ ತನ್ವಿ ಖನ್ನಾ ಅವರನ್ನು ಸೋಲಿಸಿದರು. ಮೊದಲ ಗೇಮ್‌ನಲ್ಲಿ ಅನಾಹತ್‌ ಸೋತರೂ ಎರಡನೇ ಗೇಮ್‌ನಲ್ಲಿ ಪುಟಿದೆದ್ದು ಮೈಲುಗೈ ಸಾಧಿಸಿದರು. ಈ ಹಂತದಲ್ಲಿ ಗಾಯದಿಂದಾಗಿ ತನ್ವಿ ಹಿಂದೆ ಸರಿದ ಕಾರಣ ಅನಾಹತ್‌ಗೆ ಅದೃಷ್ಟ ಒಲಿಯಿತು. 15 ವರ್ಷದ ಅನಾಹತ್‌ ಅವರು ಈ ಸಾಧನೆ ಮಾಡಿದ ಎರಡನೇ ಕಿರಿಯ ಆಟಗಾರ್ತಿ ಎನಿಸಿಕೊಂಡರು. 2000ರಲ್ಲಿ ಜೋಶ್ನಾ ಚಿಣ್ಣಪ್ಪ ಅವರು 14ನೇ ವಯಸ್ಸಿನಲ್ಲಿ ಪ್ರಶಸ್ತಿ ಗೆದ್ದಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಸ್ಥಳೀಯ ನೆಚ್ಚಿನ ಆಟಗಾರ ವೆಲವನ್ ಸೆಂಥಿಲ್‌ಕುಮಾರ್ ಅವರು 12-10, 11-3, 12-10ರಿಂದ ಅಭಯ್‌ ಸಿಂಗ್‌ ಅವರನ್ನು ಮಣಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.