ಆರ್‌ಜಿಯುಎಚ್ಎಸ್‌ ಅಥ್ಲೆಟಿಕ್ಸ್ ನಾಳೆಯಿಂದ ಮೂಡುಬಿದಿರೆ: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್‌ ಕೂಟ ಇದೇ 28ರಿಂದ 30ರ ವರೆಗೆ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ. ಆಳ್ವಾಸ್ ಆಯುರ್ವೇದ ಕಾಲೇಜು ಆಶ್ರಯದಲ್ಲಿ ಕೂಟ ನಡೆಯಲಿವೆ. ಕಳೆದ ಬಾರಿ ಪುರುಷ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದಿದ್ದ ಆಳ್ವಾಸ್‌ ಶಿಕ್ಷಣ ಸಂಸ್ಥೆ ಸಮಗ್ರ ಚಾಂಪಿಯನ್ ಪಟ್ಟವನ್ನೂ ಮುಡಿಗೇರಿಸಿಕೊಂಡಿತ್ತು. 28ರಂದು ಬೆಳಿಗ್ಗೆ 6.45ಕ್ಕೆ ಪುರುಷರ 5 ಸಾವಿರ ಮೀಟರ್ಸ್ ಓಟದ ಫೈನಲ್‌ನೊಂದಿಗೆ ಸ್ಪರ್ಧೆಗಳು ಆರಂಭವಾಗಲಿವೆ. 7.15ಕ್ಕೆ ಮಹಿಳೆಯರ 5 ಸಾವಿರ ಮೀಟರ್ಸ್ ಓಟದ ಪದಕ ನಿರ್ಧರಿಸುವ ಸ್ಪರ್ಧೆ ನಡೆಯಲಿದೆ. ಪುರುಷ ಮತ್ತು ಮಹಿಳೆಯರ 1500 ಮೀಟರ್ಸ್ ಓಟದ ಫೈನಲ್‌ನೊಂದಿಗೆ ಮೊದಲ ದಿನದ ಸ್ಪರ್ಧೆಗಳು ಮುಕ್ತಾಯಗೊಳ್ಳಲಿವೆ. ಕೂಟದ ವೇಗದ ಅಥ್ಲೀಟ್‌ಗಳನ್ನು ನಿರ್ಧರಿಸುವ 100 ಮೀಟರ್ಸ್ ಓಟ ಮೊದಲ ದಿನವೇ ನಡೆಯಲಿದೆ. ಪುರುಷ ಮತ್ತು ಮಹಿಳೆಯರ ವಿಭಾಗದ ಸ್ಪರ್ಧೆಗಳು ಕ್ರಮವಾಗಿ ಮಧ್ಯಾಹ್ನ 2.40 ಮತ್ತು 2.45ಕ್ಕೆ ಆರಂಭವಾಗಲಿವೆ. ಪುರುಷರ 20 ಸಾವಿರ ಮೀಟರ್ಸ್ ಮತ್ತು ಮಹಿಳೆಯರ 5 ಸಾವಿರ ಮೀಟರ್ಸ್ ವೇಗ ನಡಿಗೆಯ ಫೈನಲ್‌ ಮೂಲಕ ಎರಡನೇ ದಿನದ ಸ್ಪರ್ಧೆಗಳು ಬೆಳಿಗ್ಗೆ 6.30ಕ್ಕೆ ಆರಂಭಗೊಳ್ಳಲಿವೆ. ಪುರುಷ ಮತ್ತು ಮಹಿಳೆಯರ 200 ಮೀಟರ್ಸ್ ಫೈನಲ್ ಸಂಜೆ 4 ಗಂಟೆಗೆ ನಡೆಯಲಿದ್ದು ಎರಡೂ ವಿಭಾಗಗಳ 4x400 ಮೀಟರ್ಸ್ ರಿಲೇ ದಿನದ ಕೊನೆಯ ಸ್ಪರ್ಧೆ ಆಗಿರುತ್ತದೆ. ಈ ಸ್ಪರ್ಧೆಗಳು ಕ್ರಮವಾಗಿ ಸಂಜೆ 5 ಮತ್ತು 5.10ಕ್ಕೆ ನಡೆಯಲಿವೆ. ಇದಕ್ಕೂ ಮೊದಲು 3000 ಮೀಟರ್ಸ್ ಸ್ಟೀಪಲ್ ಚೇಸ್‌ನ ರೋಮಾಂಚನವಿದೆ. ಬೆಳಿಗ್ಗೆ 6.45ಕ್ಕೆ ಪುರುಷರ ಹಾಗೂ ಮಹಿಳೆಯರ 10 ಸಾವಿರ ಮೀಟರ್ಸ್ ಫೈನಲ್‌ ಕೊನೆಯ ದಿನದ ಮೊದಲ ಸ್ಪರ್ಧೆ. ಎರಡೂ ವಿಭಾಗಗಳ 4x100 ಮೀಟರ್ಸ್ ರಿಲೆಯೊಂದಿಗೆ ಕೂಟಕ್ಕೆ ತೆರೆ ಬೀಳಲಿದೆ. ಈ ಸ್ಪರ್ಧೆಗಳು ಕ್ರಮವಾಗಿ ಸಂಜೆ 5 ಮತ್ತು 5.10ಕ್ಕೆ ನಡೆಯಲಿವೆ. ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್‌ನಲ್ಲಿ ಮುರಿಯದೇ ಉಳಿದಿರುವ ಹಳೆಯ ದಾಖಲೆ ಪುರುಷರ 200 ಮೀಟರ್ಸ್‌ ಓಟದ್ದು. ಬೆಂಗಳೂರಿನಲ್ಲಿ 1999ರಲ್ಲಿ ನಡೆದ ಕೂಟದಲ್ಲಿ ಸುಳ್ಯದ ಕೆವಿಜಿ ದಂತ ವೈದ್ಯಕೀಯ ಕಾಲೇಜಿನ ಸುರೇಶ್ ಕುಮಾರ್ 22.09 ಸೆಕೆಂಡುಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.