ಜೂನಿಯರ್‌ ಹಾಕಿ ವಿಶ್ವಕಪ್‌ ಟೂರ್ನಿ: ಭಾರತಕ್ಕೆ ಜಯ ಸ್ಯಾಂಟಿಯಾಗೊ, ಚಿಲಿ: ಸಾಂಘಿಕ ಆಟ ಪ್ರದರ್ಶಿಸಿದ ಭಾರತದ ಆಟಗಾರ್ತಿಯರು ಎಫ್‌ಐಎಚ್‌ ಮಹಿಳೆಯರ ಜೂನಿಯರ್‌ ಹಾಕಿ ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಬುಧವಾರ ನಡೆದ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು 12–0 ಯಿಂದ ಕೆನಡಾ ತಂಡವನ್ನು ಸುಲಭವಾಗಿ ಮಣಿಸಿತು. ಈ ಹಿಂದಿನ ಮೂರು ಮುಖಾಮುಖಿಯಲ್ಲೂ ಗೆಲುವು ಸಾಧಿಸಿದ್ದ ಭಾರತದ ವನಿತೆಯರು ಇಲ್ಲೂ ಪಾರಮ್ಯ ಮೆರೆದರು. ಭಾರತ ತಂಡದ ಪರ ಖಾನ್ ಮುಮ್ತಾಜ್ (26, 41, 54, 60ನೇ ನಿ) ನಾಲ್ಕು ಗೋಲು ಗಳಿಸಿ ಮಿಂಚಿದರೆ, ಅನ್ನು (4, 6, 39ನೇ) ಮತ್ತು ದೀಪಿಕಾ ಸೋರೆಂಗ್ (34, 50, 54ನೇ) ತಲಾ ಹ್ಯಾಟ್ರಿಕ್‌ ಗೋಲು ತಂದಿತ್ತರು. ಟೊಪ್ಪೋ ದೀಪಿ ಮೋನಿಕಾ (21ನೇ) ಮತ್ತು ನೀಲಂ (45) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. 2022ರ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಭಾರತ ತಂಡವು, ಈ ಬಾರಿ ಜರ್ಮನಿ, ಬೆಲ್ಜಿಯಂ ಮತ್ತು ಕೆನಡಾ ತಂಡಗಳೊಂದಿಗೆ ‘ಸಿ’ ಗುಂಪಿನಲ್ಲಿದೆ. ಭಾರತ ಗುರುವಾರ ಜರ್ಮನಿ ವಿರುದ್ಧ, ಡಿ.2ರಂದು ಬೆಲ್ಜಿಯಂ ವಿರುದ್ಧ ಸೆಣಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.