ಬ್ಯಾಡ್ಮಿಂಟನ್: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಪ್ರಿಯಾಂಶು ರಾಜಾವತ್‌ ಲಖನೌ: ಭಾರತದ ಪ್ರಿಯಾಂಶು ರಾಜಾವತ್‌ ಗುರುವಾರ ಸೈಯ್ಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿ ಎಂಟರ ಘಟ್ಟ ಪ್ರವೇಶಿಸಿತು. ಈ ವರ್ಷದ ಓರ್ಲಿಯನ್ಸ್ ಮಾಸ್ಟರ್ಸ್ ಚಾಂಪಿಯನ್‌ ಪ್ರಿಯಾಂಶು ಅವರು ಎರಡನೇ ಸುತ್ತಿನಲ್ಲಿ 18–21, 6–11ರಿಂದ ಹಿಂದೆ ಇದ್ದಾಗ ಸ್ವದೇಶದ ತೀಶ್ ಕುಮಾರ್ ಕರುಣಾಕರನ್ ಪಂದ್ಯದಿಂದ ನಿವೃತ್ತಿಯಾದರು. ಹೀಗಾಗಿ, ಪ್ರಿಯಾಂಶು ಎಂಟರ ಘಟ್ಟ ಪ್ರವೇಶಿಸಿದರು. ವಿಶ್ವದ 31ನೇ ಕ್ರಮಾಂಕದ ಭಾರತದ ಆಟಗಾರ ಮುಂದಿನ ಸುತ್ತಿನಲ್ಲಿ ಇಂಡೊನೇಷ್ಯಾದ ಅಲ್ವಿ ಫರ್ಹಾನ್ ಅವರನ್ನು ಎದುರಿಸಲಿದ್ದಾರೆ. ಕಾಮನ್‌ವೆಲ್ತ್‌ ಗೇಮ್ಸ್‌ನ ಕಂಚಿನ ಪದಕ ವಿಜೇತ ಜೋಡಿ ಟ್ರೀಸಾ ಮತ್ತು ಗಾಯತ್ರಿ ಅವರು 21-9, 21-5ರಿಂದ ಭಾರತದವರೇ ಆದ ಧನ್ಯಾ ನಂದಕುಮಾರ್‌ ಮತ್ತು ರಿಧಿ ಕೌರ್ ತೂರ್ ಅವರನ್ನು ಸುಲಭವಾಗಿ ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಡೆನ್ಮಾರ್ಕ್‌ ಮಾಸ್ಟರ್‌ ವಿಜೇತ ವಿಶ್ವದ 40ನೇ ರ‍್ಯಾಂಕ್‌ನ ಕಿರಣ್‌ ಜಾರ್ಜ್‌ ಅವರು 16-21, 21-18, 20-22 ರಿಂದ ತೈವಾನ್‌ನ ಚಿಯಾ ಹಾವೊ ಲೀ ಅವರಿಗೆ ಶರಣಾದರು. ಪುರುಷರ ಸಿಂಗಲ್ಸ್‌ನಲ್ಲಿ ಭಾರತದ 10 ಆಟಗಾರರು ಸ್ಪರ್ಧೆಯಲ್ಲಿದ್ದರು. ಇದೀಗ ಪ್ರಿಯಾಂಶು ಅವರನ್ನು ಹೊರತುಪಡಿಸಿ ಉಳಿದವರು ನಿರ್ಗಮಿಸಿದ್ದಾರೆ. ವಿಶ್ವದ 12ನೇ ಕ್ರಮಾಂಕದ ಜಪಾನ್‌ನ ಕೆಂಟಾ ನಿಶಿಮೊಟೊ, 14ನೇ ಕ್ರಮಾಂಕದ ಚೀನಾ ತೈಪೆಯ ಚೌ ಟಿಯೆನ್ ಚೆನ್ ಸ್ಪರ್ಧೆಯಲ್ಲಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಒಂಬತ್ತು ಆಟಗಾರ್ತಿಯರು ಸ್ಪರ್ಧಿಸಿದ್ದರು. ಆದರೆ, ಎರಡನೇ ಸುತ್ತು ದಾಟಲು ಯಾರಿಗೂ ಸಾಧ್ಯವಾಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.