ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಕಾರ್ತಿಕೇಯ ಗುವಾಹಟಿ: ಭಾರತದ ಕಾರ್ತಿಕೇಯ ಗುಲ್ಷನ್ ಕುಮಾರ್ ಇಲ್ಲಿ ನಡೆಯುತ್ತಿರುವ ಗುವಾಹಟಿ ಮಾಸ್ಟರ್ಸ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಗುರುವಾರ ನಡೆದ ಸಿಂಗಲ್ಸ್‌ ಪಂದ್ಯದಲ್ಲಿ 23 ವರ್ಷದ ಕಾರ್ತಿಕೇಯ 21–18, 21–15ರಿಂದ ಐದನೇ ಶ್ರೇಯಾಂಕದ, ಡೆನ್ಮಾರ್ಕ್ ಆಟಗಾರ ಮ್ಯಾಡ್ಸ್‌ ಕ್ರಿಸ್ಟೋಫರ್ಸನ್ ವಿರುದ್ಧ ಗೆದ್ದರು. 36 ನಿಮಿಷ ನಡೆದ ಹಣಾಹಣಿಯ ಮೊದಲ ಗೇಮ್‌ನಲ್ಲಿ ಮಾತ್ರ ಡೆಸ್ಮಾರ್ಕ್ ಆಟಗಾರ ಹೆಚ್ಚು ಪ್ರತಿರೋಧ ತೋರಿಸಿದರು. ಎಂಟರ ಘಟ್ಟದಲ್ಲಿ ಅವರು ಮಲೇಷ್ಯಾದ ಚೀಮ್ ಜೂನ್ ವೀ ವಿರುದ್ಧ ಸೆಣಸುವರು. ಚೀಮ್ ಜೂನ್ 21–15, 21–15ರಿಂದ ಶುಭಂಕರ್ ಡೇ ವಿರುದ್ಧ ಗೆದ್ದು ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಸಿಂಗಲ್ಸ್ ವಿಭಾಗದಲ್ಲಿ ಗುಲ್ಷನ್ ಬಿಟ್ಟರೆ ಭಾರತದ ಇನ್ನುಳಿದ ಆಟಗಾರರು ಎಂಟರ ಘಟ್ಟಕ್ಕೆ ಪ್ರವೇಶಿಸಲಿಲ್ಲ. ರಾಷ್ಟ್ರೀಯ ಚಾಂಪಿಯನ್ ಮಿಥುನ್‌ ಮಂಜುನಾಥ, ಸಮೀರ್ ವರ್ಮಾ ಮತ್ತು ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಕಂಚಿನ ಪದಕ ವಿಜೇತ ಆಯುಷ್ ಶೆಟ್ಟಿ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಹೊರಬಿದ್ದರು. ಪುರುಷರ ಡಬಲ್ಸ್‌ನಲ್ಲಿ ಭಾರತದ ಅಚ್ಯುತಾದಿತ್ಯ ಮತ್ತು ವೆಂಕಟ ಹರ್ಷವರ್ಧನ ಜೋಡಿಯು 24–22, 23–21ರಿಂದ ನಾಲ್ಕನೇ ಶ್ರೇಯಾಂಕದ ಜೋಡಿ, ತೈಪೆಯ ವೀ ಚುನ್ ವೀ ಮತ್ತು ವು ಗುವಾನ್ ಶುನ್ ವಿರುದ್ಧ ಗೆದ್ದರು. ಮಹಿಳೆಯರ ಡಬಲ್ಸ್‌ನಲ್ಲ ಎರಡನೇ ಶ್ರೇಯಾಂಕದ ಅಶ್ವಿನಿ ಪೊನ್ನಪ್ಪ ಮತ್ತು ತನೀಷಾ ಕ್ರೆಸ್ಟೊ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಭಾರತದ ಜೋಡಿಯು 21–13, 21–8ರಲ್ಲಿ ಹೂಡಾ ಮತ್ತು ಪಲಕ್ ಅರೋರಾ ವಿರುದ್ಧ ಜಯಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.