ಡೋಪಿಂಗ್: ಪಾಲ್ ಪೋಗ್ಬಾಗೆ ಗರಿಷ್ಠ 4 ವರ್ಷ ನಿಷೇಧಕ್ಕೆ ಮನವಿ ರೋಮ್: ಉದ್ದಿಪನ ಮದ್ದು ಪರೀಕ್ಷೆಯಲ್ಲಿ ಟೆಸ್ಟೊಸ್ಟೆರಾನ್‌ ಅಂಶ ಕಂಡುಬಂದಿರುವ ಕಾರಣ ವಿಶ್ವಕಪ್‌ ವಿಜೇತ ಯುವೆಂಟಸ್ ತಂಡದ ಮಿಡ್‌ ಫೀಲ್ಡರ್‌ ‌ಪಾಲ್ ಪೋಗ್ಬಾ ಅವರಿಗೆ ಗರಿಷ್ಠ ನಾಲ್ಕು ವರ್ಷಗಳ ನಿಷೇಧ ವಿಧಿಸುವಂತೆ ಇಟಲಿಯ ಪ್ರಾಸಿಕ್ಯೂಟರ್‌ಗಳು ಗುರುವಾರ ಮನವಿ ಮಾಡಿದ್ದಾರೆ. ಇಟಲಿಯ ಡೋಪಿಂಗ್ ಸಂಸ್ಥೆ ಜತೆ ಈ ವಿಚಾರವಾಗಿ ಯಾವುದೇ ಮನವಿ ಮಾಡದಿರಲು ‍ಪೋಗ್ಬಾ ನಿರ್ಧರಿಸಿದ್ದಾರೆ. ಈ ಪ್ರಕರಣವನ್ನು ದೇಶದ ಉದ್ದೀಪನ ಮದ್ದು ವಿರೋಧಿ ನ್ಯಾಯಾಲಯ ವಿಚಾರಣೆ ನಡೆಸಲಿದ್ದು, ನಾಲ್ಕು ವರ್ಷಗಳ ಶಿಕ್ಷೆ ದೃಢಪಟ್ಟರೆ, 30 ವರ್ಷದ ಪೋಗ್ಬಾ ಅವರ ವೃತ್ತಿಜೀವನಕ್ಕೆ ತೆರೆ ಬೀಳುವ ಸಾಧ್ಯತೆ ಇದೆ. ವಿಶ್ವ ಉದ್ದೀಪನ ಮದ್ದು ವಿರೋಧಿ ಸಂಹಿತೆ ಅಡಿ ನಾಲ್ಕು ವರ್ಷಗಳ ನಿಷೇಧ ಶಿಕ್ಷೆ ಇದೆ. ಆದರೆ, ಕ್ರೀಡಾಪಟುಗಳು ತಮ್ಮ ಮದ್ದುಸೇವನೆ ಉದ್ದೇಶಪೂರ್ವಕವಲ್ಲ ಎಂದು ಸಾಬೀತುಪಡಿಸಿದ ಸಂದರ್ಭದಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಮಾಡುವ ಸಾಧ್ಯತೆ ಇದೆ. ಆಗಸ್ಟ್ 20ರಂದು ಉಡಿನೆಸ್‌ನಲ್ಲಿ ಯುವೆಂಟಸ್ ಪಂದ್ಯದ ಬಳಿಕ ನಡೆಸಿದ ಪರೀಕ್ಷೆಯಿಂದ ಪೋಗ್ಬಾ ಅವರು ಮದ್ದು ಸೇವನೆಯಲ್ಲಿ ಸಿಕ್ಕಿ ಬಿದ್ದಿರುವುದನ್ನು ಸೆಪ್ಟೆಂಬರ್‌ನಲ್ಲಿ ‌ಪ್ರಕಟಿಸಲಾಯಿತು. ಪೋಗ್ಬಾ ಎ ಗುಂಪಿನ ಪಂದ್ಯದಲ್ಲಿ ಆಡಲಿಲ್ಲ. ಆದರೆ ಬೆಂಚ್‌ನಲ್ಲಿದ್ದರು. ಈ ಪ್ರಕರಣದ ಕುರಿತು ಪೋಗ್ಬಾ ಸಾರ್ವಜನಿಕ ಹೇಳಿಕೆ ನೀಡಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.